ಸಿರುಗುಪ್ಪ : ತಾಲೂಕು ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ವಿವಿಧ ಹಿಂದೂ ಪರ ಸಂಘಟನೆಗಳು ನಗರದ ಕೆಇಬಿ ಕಛೇರಿಯ ಆವರಣದಲ್ಲಿರುವ ಶ್ರೀ ಮಹಾಶಕ್ತಿ ಗಣೇಶ ದೇವಸ್ಥಾನದಿಂದ ಮಹಾತ್ಮ ಗಾಂಧಿ ವೃತ್ತದವರೆಗೂ ಬೃಹತ್ ಪ್ರತಿಭಟನೆಯ ಮಾಡಿ ಹಂತಕರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿ ಬಿಕೆಎಸ್ ಚನ್ನಬಸವ ಮಾತನಾಡಿ ನಮ್ಮದೇ ನೆಲವಾದ ಹಿಂದೂಸ್ಥಾನದಲ್ಲಿ ಇಸ್ಲಾಮಿಕ್ ಮೂಲಭೂತಬಾದಿಗಳಿಂದ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದ್ದು, ಅವರ ಭೀಕರ ಕೃತ್ಯಕ್ಕೆ ಹಿಂದುಗಳ ಬಲಿಯಾಗುತ್ತಿದ್ದಾರೆ.
ಹಾಡ ಹಗಲಲ್ಲೇ ಹಿಂದೂ ದರ್ಜಿಯ ತಲೆ ತೆಗೆದು ಚಿತ್ರೀಕರಿಸಿ ದೇಶದ ಪ್ರಧಾನಿಗಳನ್ನೂ ಇದೇ ರೀತಿ ಮಾಡುವುದಾಗಿ ಬೆದರಿಕೆ ಹಾಕುತ್ತಿರುವುದು ರಕ್ಕಸ ಕೃತ್ಯಕ್ಕೆ ಸಾಕ್ಷಿಯಾಗಿದೆ.
ಈ ಕೂಡಲೇ ರಾಷ್ಟ್ರಪತಿಯವರು ಮತ್ತು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ದೇಶದಲ್ಲಿ ಭಯದ ವಾತಾವರಣವನ್ನುಂಟು ಮಾಡುತ್ತಿರುವ ಭಯೋತ್ಪಾದಕರನ್ನು ಬಹಿರಂಗವಾಗಿ ಗಲ್ಲಿಗೇರಿಸುವಂತೆ ಒತ್ತಾಯಿಸಿದರು.
ಬಿಜೆಪಿ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಎಂ.ಎಸ್ ಸಿದ್ದಪ್ಪ ನಾಯಕ ಮಾತನಾಡಿ ನೂಪೂರ್ ಶರ್ಮ ಅವರ ಹೇಳಿಕೆಯನ್ನು ಬೆಂಬಲಿಸಿದ ಕನ್ಹಯ್ಯ ಲಾಲ್ ಅವರಿಗೆ ಅನೇಕ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ಸಂಬಂಧಿಸಿದ ಠಾಣೆಯಲ್ಲಿ ದೂರು ನೀಡಿದರೂ ರಕ್ಷಣೆಗೆ ಮುಂದಾಗದಿರುವುದಕ್ಕೆ ಜಿಹಾದಿಗಳ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಕಾಂಗ್ರೆಸ್ ಆಡಳಿತದ ರಾಜಸ್ಥಾನ ಸರ್ಕಾರವೇ ನೇರ ಕಾರಣವಾಗಿದೆ. ಆದ್ದರಿಂದ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ವಿಶ್ವ ಹಿಂದೂ ಪರಿಷತ್ತಿನ ತಾಲೂಕ ಅಧ್ಯಕ್ಷ ಚಾಗಿ ಸುಬ್ಬಯ್ಯ ಶೆಟ್ಟಿ, ಉಪಾಧ್ಯಕ್ಷ ಹೆಗಡೆ ಆನಂದ, ತಾಲೂಕು ಪ್ರಧಾನ ಕಾರ್ಯದರ್ಶಿ ಎ.ಜೆ. ಮಂಜುನಾಥ, ಇನ್ನಿತರ ಮುಖಂಡರು ಇದ್ದರು.