ಇಂಡಿ : ಹೋರಾಟ ಮಾಡದಿದ್ದರೆ ಪರವಾಗಿಲ್ಲ, ಆದರೆ ಮಾರಾಟವಾಗಬೇಡಿ ಎಂದು ಬಂಜಾರ ಸಮುದಾಯದ ಮುಖಂಡರಿಗೆ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ಮಹೇಶ ನಾಯಕ ಶುಕ್ರವಾರ ಹೇಳಿದರು.
ಪಟ್ಟಣದ ಖಾಸಗಿ ಹೊಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಬಂಜಾರ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ. ಇಡೀ ಭಾರತದಲ್ಲಿ ಅತೀ ಕಡು ಬಡತನದಲ್ಲಿ ಬಂಜಾರ ಸಮುದಾಯವಿದೆ. ಇಂತಹ ಕಡುಬಡತದಿಂದಾಗಿ ಬೇರೆ ಧರ್ಮಕ್ಕೆ ಬದಲಾವಣೆ ಯಾಗುವುದು, ಮಕ್ಕಳ ಮಾರಾಟ ಮಾಡುವಂತ ಸ್ಥಿತಿ, ಪರಿಸ್ಥಿತಿ ಎರಡು ಕಾಣುತ್ತಿವೆ. ಈ ಎಲ್ಲಾ ಚಟುವಟಿಕೆ ಗಮನಿಸಿದ್ರೆ ಸಮುದಾಯದ ಪರಿಸ್ಥಿತಿ ಶೋಚನೀಯವಾಗಿದೆ. ಆದರೆ ಇತ್ತೀಚೆಗೆ ನಿರ್ದಿಷ್ಟವಾಗಿ ಒಳ ಮೀಸಲಾತಿ ಸಂಚನ್ನು ರೂಪಿಸಿ ಬಂಜಾರ ಸಮುದಾಯವನ್ನು ತುಳಿಯುವ ಲೆಕ್ಕದಲ್ಲಿ ಕೈ ಹಾಕಿದ್ದನ್ನು ತೀವ್ರವಾಗಿ ಖಂಡಿಸುತ್ತೆನೆ ಎಂದು ಹೇಳಿದರು.
ಅದಲ್ಲದೇ ಬೇರೆ ಪಕ್ಷಗಳು ಸಹ ಬಂಜಾರ ಸಮುದಾಯ ಮುಖಂಡರ, ನಾಯಕರ ಹಾಗೂ ಸಮುದಾಯದ ಉಪಯೋಗ ಮತ್ತು ಲಾಭವನ್ನು ಪಡೆದುಕೊಂಡು, ಕೆಲವೊಂದು ವಿಚಾರ ಬಂದಾಗ ತುಳಿಯುವ ಕೈ ಬಿಡುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಮಾನದಲ್ಲಿ ಸಮಾಜಕ್ಕೆ ಅನ್ಯಾಯ ಮಾಡಲಿಕ್ಕೆ ಯಾರೇ ಯಾವುದೇ ಪಕ್ಷದವರು ಕೈ ಹಾಕಿದ್ರೆ ಅವರಿಗೆ ತಕ್ಕ ಉತ್ತರ ಕೊಡಬೇಕಾಗಿದೆ.
ಆದರೆ ಸದ್ಯ ಸಮುದಾಯಕ್ಕೆ ಜಾಗೃತಿ ಕರೆ ಕೊಡುವುದು ಅತೀ ಅವಶ್ಯಕವಾಗಿದೆ. ಎಲ್ಲರಿಗೂ ಗೊತ್ತು ಇರುವಂತೆ ಈ ಬಾರಿ ಚುನಾವಣೆಯಲ್ಲಿ ಮತ್ತೇ ಬಂಜಾರ ಸಮುದಾಯದ ಮತಗಳನ್ನು ಪಡೆದು ಜನಪ್ರತಿನಿಧಿಗಳಾಗಿ ಅಯ್ಕೆಯಾಗಿ, ಷಡ್ಯಂತರದಿಂದ ಬಂಜಾರ ಸಮುದಾಯವನ್ನು ತುಳಿಯುವ ಪ್ರಯತ್ನ ಮಾಡುವ ಹುನ್ನಾರವಿದೆ. ಒಂದು ವೇಳೆ ಎಚ್ಚರಿಕೆ ವಹಿಸಿದಿದ್ದರೆ, ನಿರ್ಲಕ್ಷ್ಯ ವಹಿಸಿದ್ರೆ ಮಕ್ಕಳ ಭವಿಷ್ಯ, ಇಡೀ ಜೀವನ ಪರ್ಯಂತ ನಿದ್ದೆ ಗೆಡುವ ಪರಿಸ್ಥಿತಿ ಎದುರಿಸ ಬೇಕಾಗುತ್ತದೆ. ಸಮುದಾಯದ ಎಲ್ಲಾ ನಾಯಕರು ಒಂದಾಗಿ ಒಂದು ದೃಡವಾದ ನಿರ್ಧಾರ ಕೈಗೊಳ್ಳುವ ಸಲುವಾಗಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದಿಂದ ಅತೀ ಶೀಘ್ರದಲ್ಲಿ ಸಭೆ ಹಮ್ಮಿಕೊಳ್ಳಲಾಗುತ್ತದೆ. ಸಮುದಾಯದ ಮುಖಂಡರು, ಹಿರಿಯರು ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸಿಬೇಕಾಗುತ್ತದೆ. ಹಾಗಾಗಿ ತಾಲ್ಲೂಕಿನ ಎಲ್ಲಾ ತಾಂಡಾದ ನಾಯಕ, ಕಾರಬಾರಿಗಳು, ಕೊಂಚಿ ಕೊರವ, ವಡ್ಡರ್ ಸಮುದಾಯದ ಮುಖಂಡರು ಆಗಮಿಸಿ ದೃಡ ನಿರ್ಧಾರ ತೆಗೆದುಕೊಳ್ಳುವುದರ ಜೊತೆಗೆ ಇಡೀ ಜಿಲ್ಲಾ ಬಂಜಾರ ಅನ್ಯಾಯ ಎಸಿಗಿರುವ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಸಲಹೆ ನೀಡಬೇಕು ಎಂದು ಹೇಳಿದರು.
ತಾಲ್ಲೂಕು ಅಧ್ಯಕ್ಷ ಸಂಜೀವ ಚವ್ಹಾಣ ಮಾತಾನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರ.ಕಾ. ಸುನೀಲ್ ರಾಠೋಡ, ಸಮಾಜ ಮುಖಂಡ, ನಿವೃತ್ತ ನೌಕರ ಬಿ.ಟಿ. ರಾಠೋಡ ಉಪಸ್ಥಿತರಿದ್ದರು.