ಇಂಡಿ :ತಾಲೂಕು ಸರ್ಕಾರಿ ಬಸ್ ನಿಲ್ದಾಣದಲ್ಲಿ ಹಾಗೂ ನಗರದ ಹೃದಯ ಭಾಗದ ಬಸವೇಶ್ವರ ವೃತದಲ್ಲಿ ಅಪರಾಧ ಮಾಸಾಚರಣೆ ಅಂಗವಾಗಿ ಜಾಗೃತಿ ಜಾಥಾಕ್ಕೆ ಮಂಗಳವಾರ
ಚಾಲನೆ ನೀಡಲಾಯಿತು.
ಶಹರ ಠಾಣಾ ಪಿಎಸ್ಐ ಆರ್. ಎಚ್ ಹಳ್ಳಿ ಮಾತನಾಡಿ, ‘ಅಪರಾಧಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದು, ಅಪರಾಧಗಳು ಆಗದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಲು ಅಪರಾಧ ತಡೆ ಮಾಸಾಚರಣೆ ಆಚರಿಸಲಾಗುತ್ತಿದೆ. ಕೇವಲ ಪೊಲೀಸರಿಂದ ಅಪರಾಧಗಳ ತಡೆ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ ಮಾಹೆಯನ್ನು ಅಪರಾಧ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು. ಅಪರಾಧಗಳು ನಡೆದ ಮೇಲೆ ತನಿಖೆ ನಡೆಸುವುದಕ್ಕಿಂತ, ಆಪರಾಧ ಆಗದಂತೆ ನೋಡಿಕೊಳ್ಳುವುದು ಉತ್ತಮ. ಈ ತಿಂಗಳಿನಲ್ಲಿ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ಏರ್ಪಡಿಸುವುದು, ಕರಪತ್ರಗಳು ಮತ್ತು ಸಾರ್ವಜನಿಕ ಸಭೆಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಯಾವುದೇ ಅಪರಾಧವನ್ನು ಕಂಡಿದ್ದ ಸಂದರ್ಭದಲ್ಲಿ ಧೈರ್ಯವಾಗಿ ಮುಂದೆ ಬಂದು ಸಾಕ್ಷಿ ಹೇಳಬೇಕು. ಒಂದು ವೇಳೆ ಹೀಗಾಗದಿದ್ದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ತಪ್ಪಿತಸ್ಥರು ತಪ್ಪಿಸಿಕೊಂಡು ಮತ್ತೆ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಲಿದ್ದಾರೆ ಎಂದರು. ನಗರ ನಿವಾಸಿಗಳು ಮನೆಗೆ ಬೀಗ ಹಾಕಿ ಬೇರೆ ಊರುಗಳಿಗೆ ತೆರಳುವಾಗ ಪೊಲೀಸ್ ಠಾಣೆಗೆ ಲಿಖಿತ ಮಾಹಿತಿ ನೀಡಬೇಕು. ಅಥವಾ ಗೃಹ ರಕ್ಷಕ ತಂತ್ರಾಂಶದಲ್ಲಿ ಬೀಗ ಹಾಕುವ ಮನೆ ಇರುವ ಸ್ಥಳದ ಮಾಹಿತಿ ಸೇರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಎಸ್ಐ ಬಿ ಎಮ್ ಪವಾರ, ಎಎಸ್ಐ ಪಿ ಎ ಅರವತ್ತಿ, ಪೆದೆ ಮಂಜುನಾಥ ಬಡಿಗೇರ, ರಸೂಲ್ ಕಂಬಾರ, ಹಾಗೂ ಕಾಲೇಜು ವಿಧ್ಯಾರ್ಥಿಗಳು ಅಟೋ ಚಾಲಕರು, ಪೊಲೀಸ್ ಅಧಿಕಾರಿಗಳು ಮತ್ತು ಪ್ರಯಾಣಿಕರು ಉಪಸ್ಥಿತರಿದ್ದರು.