ಫೆ. 9 ರಂದು ಸಚಿವ ಈಶ್ವರ ಖಂಡ್ರೆ ಜನಸ್ಪಂದನ ಕಾರ್ಯಕ್ರಮ
Voice Of Janata : ಔರಾದ : ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಫೆ. 9ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಪಟ್ಟಣದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಜನಸ್ಪಂದನ ಹಾಗೂ ಗ್ಯಾರಂಟಿ ಯೋಜನೆಗಳ ಸಮಾವೇಶ ನಡೆಯಲಿದೆ ಎಂದು ತಹಸೀಲ್ದಾರ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಒಟ್ಟು 7 ಕೌಂಟರ್ ಸ್ಥಾಪನೆ ಮಾಡಲಾಗುತ್ತಿದೆ. ಈ ಪೈಕಿ ಗ್ಯಾರಂಟಿ ಯೋಜನೆಗಾಗಿ 5 ಕೌಂಟರ್ ಮತ್ತು ಇತರೆ ಅಹವಾಲು ಸ್ವೀಕರಿಸಲು 2 ಕೌಂಟರ್ ಸ್ಥಾಪಿಸಲಾಗುತ್ತಿದೆ ಎಂದರು.
ಅಂದು ಬೆಳಗ್ಗೆ 10 ಗಂಟೆಯಿಂದ ಅಹವಾಲು ಸ್ವೀಕರಿಸುತ್ತಿದ್ದು, ಸ್ವೀಕರಿಸಿದ ಅಹವಾಲುಗಳನ್ನು ಇಲಾಖಾವಾರು ವಿಂಗಡಿಸಿ ತಂತ್ರಾಂಶದಲ್ಲಿ ದಾಖಲಿಸಿ ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಿದ ನಂತರ ಸಚಿವರು ಅವರ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸುವರು. ಸಾರ್ವಜನಿಕರು ಅಹವಾಲು ಪತ್ರದ
ದ್ವಿಪತ್ರಿಯೊಂದಿಗೆ ಆಗಮಿಸುವಂತೆ ತಿಳಿಸಿದ್ದಾರೆ. ಇನ್ನೂ ತಾಲೂಕಿನಲ್ಲಿ ಮಾರ್ಗಗಳು ಗುರುತಿಸಿ, ಗ್ರಾಮ ಪಂಚಾಯತಿಗೆ ಒಂದು ಬಸ್ ಸೇರಿದಂತೆ ಒಟ್ಟು 21 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತವಾಗಿ ಆಗಮಿಸಿದರೇ, ಪುರುಷರು ತಮ್ಮ ಶುಲ್ಕ ನೀಡಿ ಆಗಮಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಭಾಗವಹಿಸುತ್ತಿದ್ದು, ಸಾರ್ವಜನಿಕರ ಅಹವಾಲುಗಳಿಗೆ ಪರಿಹಾರ ತ್ವರಿತ ಒದಗಿಸುವ ಆಶಯದೊಂದಿಗೆ ಜನಸ್ಪಂದನೆ ನಡೆಯುತ್ತಿದೆ. ಈಗಾಗಲೇ ಗ್ಯಾರಂಟಿ ಯೋಜನೆಗಳ ಸಂಬಂಧಪಟ್ಟ ಇಲಾಖೆಗೆ ಫಲಾನುಭವಿಗಳಿಗೆ ಮಾಹಿತಿ ನೀಡುವ ಮೂಲಕ ಸಮಾವೇಶಕ್ಕೆ ಆಹ್ವಾನಿಸುವಂತೆ ತಿಳಿಸಲಾಗಿದೆ. ಎಲ್ಲ ರೀತಿಯ ಸಿದ್ಧತೆಗಳು ಮಾಡಿಕೊಳ್ಳಲಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳ ಸಭೆಯೂ ನಡೆಸಲಾಗಿದೆ. ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ತಮ್ಮ ಅಹವಾಲು ಸಲ್ಲಿಸಲು ತಹಸೀಲ್ದಾರ ನಾಗಯ್ಯ ಸ್ವಾಮಿ ತಿಳಿಸಿದ್ದಾರೆ.