ಇಟ್ಟಂಗಿಹಾಳ ಕೆರೆಗೆ ಸಚಿವ ಎಂ.ಬಿ.ಪಾಟೀಲ ಅವರಿಂದ ಬಾಗಿನ ಅರ್ಪಣೆ
ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಇಟ್ಟಂಗಿಹಾಳ ಕೆರೆ ತುಂಬಿಸಿದ್ದೆ ಸಾಕ್ಷಿ -ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ
ವಿಜಯಪುರ ಜುಲೈ 26 : ಅತಿ ಎತ್ತರದ ಪ್ರದೇಶವಾಗಿರುವ ಇಟ್ಟಂಗಿಹಾಳಕ್ಕೆ ನೀರು ಹರಿಸುವುದು ಕಷ್ಟಕರ ಹಾಗೂ ಕಷ್ಟಸಾಧ್ಯವಾಗಿರುವುದನ್ನು ಛಲದಿಂದ, ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಸಾಕ್ಷಿಯಾಗಿ ಈ ಪ್ರದೇಶದಲ್ಲಿ ನೀರು ಹರಿಸಿ ಇಟ್ಟಂಗಿಹಾಳ ಕೆರೆ ತುಂಬಿಸಿರುವುದು ಅತ್ಯಂತ ಸಂತಸ ತಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.
ಜಲಸಂಪನ್ಮೂಲ ಇಲಾಖೆಯ ವತಿಯಿಂದ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಇಟ್ಟಂಗಿಹಾಳ ಕೆರೆಗೆ ಶನಿವಾರ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಅತಿ ಎತ್ತರದ ಪ್ರದೇಶವಾದ ಇಟ್ಟಂಗಿಹಾಳ ಹಾಗೂ ಜಾಲಗೇರಿ ಕೆರೆಗಳಿಗೆ ನೀರು ಬರುವುದು ಅತ್ಯಂತ ಕಷ್ಟಕರವಾಗಿತ್ತು. ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಇಟ್ಟಂಗಿಹಾಳ ಕೆರೆ ತುಂಬಿಸಲು ಯೋಜನೆ ರೂಪಿಸಿಕೊಂಡು, ಕಷ್ಟಕರವಾದ ಈ ಕಾರ್ಯವನ್ನು 1,15000 ಎಚ್.ಪಿ. ಸಾಮಥ್ರ್ಯವುಳ್ಳ 5 ಮೋಟರ್‍ಗಳನ್ನು ಬಳಸಿ, ನೀರನ್ನು ಹರಿಸಿ ಇಟ್ಟಂಗಿಹಾಳ ಕೆರೆಯನ್ನು ತುಂಬಿಸಲಾಗಿದೆ. ಕಳೆದ 20 ವರ್ಷಗಳ ಹಿಂದೆ ನಾನು ನಿರ್ಮಿಸಿದ ಕೆರೆಗೆ ಇಂದು ಬಾಗಿನ ಅರ್ಪಿಸಿದ್ದು ಅತ್ಯಂತ ಸಂತಸ ತಂದಿದ್ದು, ಈ ಭಾಗದ ಅಂತರಜಲಮಟ್ಟ ಹೆಚ್ಚಾಗಿ ರೈತರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ಈ ಭಾಗದಲ್ಲಿ ಕೆರೆಗಳಿಗಿಂತಲೂ ಹೆಚ್ಚು ವಿಸ್ತ್ರೀರ್ಣ ಹೊಂದಿದ 120 ಬಾಂದಾರ್‍ಗಳನ್ನು ತುಂಬಿಸಲಾಗಿದೆ.ಇಟ್ಟಂಗಿಹಾಳ ಕೆರೆಯ ಪಕ್ಕದಲ್ಲಿರುವ 60 ಎಕರೆ ಸರ್ಕಾರಿ ಜಮೀನು ಬಳಸಿಕೊಂಡು, ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಇನ್ನಷ್ಟು ಅಭಿವೃದ್ದಿಪಡಿಸಿ ಇಟ್ಟಂಗಿಹಾಳ ಕೆರೆ ವಿಸ್ತ್ರೀರ್ಣ ದ್ವಿಗುಣಗೊಳಿಸಿ, ನೀರಿನ ಸಾಮಥ್ರ್ಯವನ್ನು ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.
ತಿಕೋಟಾ ತಾಲೂಕಿನ, ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ ಬರುವ 21, ಜಿಲ್ಲಾ ಪಂಚಾಯತ್ ವ್ಯಾಪ್ತಿಯ 07, ಗ್ರಾಮ ಪಂಚಾಯತ್ ವ್ಯಾಪ್ತಿಯ 02 ಹಾಗೂ ಪಟ್ಟಣ ಪಂಚಾಯತ್ ವ್ಯಾಪ್ತಿಯ 2 ಕೆರೆಗಳು ಸೇರಿದಂತೆ ಒಟ್ಟು 32 ಕೆರೆಗಳು ಹಾಗೂ ಬಬಲೇಶ್ವರ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯ 14, ಜಿಲ್ಲಾ ಪಂಚಾಯತ್ ವ್ಯಾಪ್ತಿಯ 11, ಪಟ್ಟಣ ಪಂಚಾಯತ್ ವ್ಯಾಪ್ತಿಯ 02 ಸೇರಿದಂತೆ ಒಟ್ಟು 27 ಕೆರೆಗಳನ್ನು ತುಂಬಿಸಲಾಗಿದ್ದು, ಈ ಭಾಗದಲ್ಲಿ ಅಂತರಜಲಮಟ್ಟ ಹೆಚ್ಚಿಸಿ ಮಾದರಿ ಜಿಲ್ಲೆಯನ್ನಾಗಿ ರೂಪಿಸಲಾಗುವುದು ಎಂದು ಅವರು ಹೇಳಿದರು.
2013-18ರ ಅವಧಿಯಲ್ಲಿ ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ತಿಕೋಟಾ ಹೊಬಳಿವೊಂದಕ್ಕೆ 3600 ಕೋಟಿ ರೂ.ಗಳನ್ನು ನೀರಾವರಿ ಯೋಜನೆಗಳಿಗೆ ಒದಗಿಸಲಾಗಿದೆ. ಅದರಂತೆ ಏಷಿಯಾದ ಅತಿ ಉದ್ದವಾದ 14.75 ಕಿ.ಮೀ. ಉದ್ದ ತಿಡಗುಂದಿ ಅಕ್ವಾಡೆಕ್ಟ್ ನಿರ್ಮಾಣ ಮಾಡುವ ಮೂಲಕ ಕೃಷ್ಣಾ ನದಿಯ ನೀರನ್ನು ಭೀಮೆಯ ಒಡಲಿಗೆ ತರುವ ಮಹತ್ವಕಾರ್ಯ ಮಾಡಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯ ರೈತರ ಬಾಳನ್ನು ಬೆಳಗಿಸುವ ಕನಸಿನ ಯೋಜನೆಯ ಸಾಕಾರಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಜಿಲ್ಲೆಯ ಕೆನಾಲ್ ನೆಟವರ್ಕ್‍ಗಳಲ್ಲಿ ಕಾಲುವೆ ಜಾಲಗಳ 165 ಹಳ್ಳಗಳಿಗೆ ಚೆಕ್‍ಡ್ಯಾಂ ನಿರ್ಮಾಣ ಮಾಡಿ ನೀರು ಇಂಗಿಸುವ ಮೂಲಕ ಅಂತರಜಲಮಟ್ಟ ಹೆಚ್ಚಿಸಿ ನೀರಾವರಿಗೊಳಪಡಿಸಿ ರೈತರಿಗೆ ಅನುಕೂಲ ಕಲ್ಪಿಸುವ ಮೂಲಕ ಬರದ ನಾಡಿನ ಹಣೆಪಟ್ಟಿ ತೆಗೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.
ನೀರಾವರಿಗಷ್ಟೇ ಅಲ್ಲದೇ ಜಿಲ್ಲೆಯಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ವಿಶೇಷವಾಗಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಉತ್ತೇಜನ ನೀಡಲಾಗಿದೆ. ಸಿ.ಎಸ್.ಆರ್. ಅನುದಾನವನ್ನು ಬಳಸಿಕೊಂಡು ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್, ಆಟದ ಸಾಮಗ್ರಿಗಳನ್ನು ವಿತರಣೆ ಮಾಡುವ ಮೂಲಕ ಶಿಕ್ಷಣಕ್ಕೆ ಪ್ರೊತ್ಸಾಹಿಸಿ, ಗುಣಮಟ್ಟ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದ ಅವರು, ಈಗಾಗಲೇ ಅರಕೇರಿ ಎಲ್.ಟಿ.-3ಯಲ್ಲಿ ಸಿ.ಎಸ್.ಆರ್. ಅನುದಾನ ಬಳಸಿಕೊಂಡು ಪ್ರಾಥಮಿಕ ಶಾಲಾ ಮಕ್ಕಳಿಗೆ ಆಟದ ಸಾಮಾನು ಒದಗಿಸುವ ಮೂಲಕ ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗೆ ಪ್ರೊತ್ಸಾಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಂಬಣ್ಣ ಹರಳಯ್ಯ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿಜಯ ವಸ್ತ್ರದ, ತಿಕೋಟಾ ತಹಶೀಲ್ದಾರ ಸುರೇಶ ಚವಲರ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೊಟೆ, ಭೀಮಸಿಂಗ ಮಹಾರಾಜ್, ಸಿದ್ದು ಗೌಡನವರ, ಡಿ.ಆರ್.ನಿಡೋಣಿ, ರಾಜುಗೌಡ ಬಿರಾದಾರ, ಬಾಬು ಗುಲಗಂಜಿ, ಹಣಮಂತ ಮುಚ್ಚಂಡಿ, ಬಿ.ಟಿ.ರಾಠೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.