ನೂರು ದೇವಾಲಯ ಕಟ್ಟೊದಕ್ಕಿಂತ ಒಂದು ಶಾಲೆ ಕಟ್ಟೊದು ಸೂಕ್ತ : ಅಭಿನವ ಮುರಘೇಂದ್ರ ಶಿವಾಚಾರ್ಯರು
ಓದುವ ಸ್ಪರ್ಧೆಗಿಂತ ಮಕ್ಕಳಿಗೆ ಕೌಶಲ್ಯಗಳನ್ನು ಕಲಿಸಬೇಕು.!
ಇಂಡಿ : ನೂರು ದೇವಾಲಯ ಕಟ್ಟೊದಕ್ಕಿಂತ ಒಂದು ಶಾಲೆ ಕಟ್ಟೊದು ಸೂಕ್ತ, ಸಮಾಜದೊಳಗೆ ಏನಾದರೂ ಒಳ್ಳೆಯದು ಮಾಡಬೇಕಂದರೆ ಅವಮಾನ, ಅಪಮಾನ, ನಿಂದನೆ ಎಲ್ಲವೂ ಮೆಟ್ಟಿ ನಿಂತಾಗ ಸಾಧಕನಾಗಲು ಸಾಧ್ಯ ಎಂದು ಶಿರಶ್ಯಾಡ ಹಿರೇಮಠದ ಷ.ಬ್ರ.ಅಭಿನವ ಮುರಘೇಂದ್ರ ಶಿವಾಚಾರ್ಯರು ಮಂಗಳವಾರ ಹೇಳಿದರು.
ತಾಲ್ಲೂಕಿನ ಹಿರೇರೂಗಿ ಗ್ರಾಮದ ಶಾಂತಿ ನಗರದಲ್ಲಿರುವ ಶ್ರೀ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯ 15 ನೇ ವಾರ್ಷಿಕೋತ್ಸವ ಹಾಗೂ ಬಿಳ್ಕೊಡುವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
‘ಗ್ರಾಮೀಣ ಭಾಗದ ರೈತರ ಮಕ್ಕಳಿಗೆ ಭವಿಷ್ಯ ನಿರ್ಮಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು. ನಗರಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬ ಭಾವನೆಯನ್ನು ಪಾಲಕರಲ್ಲಿ ಹೊಡೆದು ಹಾಕುವ ಕಾರ್ಯ ಗ್ರಾಮೀಣ ಭಾಗದಲ್ಲಿ ನಡೆಯಲಿ. ಮಕ್ಕಳಿಗೆ ಹೊಸ ಹೊಸ ತರಬೇತಿ ನೀಡುವ ಮೂಲಕ ಅವರ ಮೆದುಳು ಇನ್ನಷ್ಟು ಚುರುಕಾಗುವಂತೆ ಶಿಕ್ಷಕರು ಮಾಡಲಿ’ ಎಂದು ಹೇಳಿದರು.
ಉತ್ತಮ ಶಿಕ್ಷಣವು ನಿಮ್ಮನ್ನು ಇತರರಿಗಿಂತ ಬಲಶಾಲಿ ಎಂದು ಭಾವಿಸುವಂತೆ ಮಾಡುತ್ತದೆ. ಗುಣಮಟ್ಟದ ಶಿಕ್ಷಣ ಮಾತ್ರ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ ಏಕೆಂದರೆ ಈ ಜಗತ್ತಿನ ಪ್ರತಿಯೊಂದು ಒಳ್ಳೆಯ ವಿಷಯದ ಹಿಂದೆಯೂ ಉಜ್ವಲ ಮನಸ್ಸುಗಳಿವೆ. ಶಿಕ್ಷಣವು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಇನ್ನೂ ಸಾಹಿತಿ,ಶಿಕ್ಷಕ ದಶರಥ ಕೋರಿ ಉಪನ್ಯಾಸ ನೀಡಿ ಮಾತನಾಡಿದ ಅವರು,ಇಂದಿನ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಬರೀ ಓದು, ಓದು,ಓದು ಎನ್ನುವ ಸ್ಪರ್ಧೆಗಿಂತ ಮಕ್ಕಳಿಗೆ ಸ್ವಾವಲಂಬನೆಯಿಂದ ಸಮಾಜದಲ್ಲಿ ಬದುಕಲು ಹಾಗೂ ಜೀವನದಲ್ಲಿ ಬರುವ ಹಲವಾರು ಕಠಿಣ ಸವಾಲುಗಳನ್ನು ಎದುರಿಸುವಲ್ಲಿ ಬೇಕಾದ ಕೌಶಲ್ಯಗಳನ್ನು ಕಲಿಸಬೇಕು.
ಪ್ರಸ್ತುತ ಭಾರತ ದೇಶದ ಜನಸಂಖ್ಯೆ 1. 40 ಕೋಟಿಗಿಂತ ಮಿತಿಮಿರಿದೆ ಇದರೊಂದಿಗೆ ಸಹಜವಾಗಿ ಕರ್ನಾಟಕದ ಜನಸಂಖ್ಯೆ ಕೂಡಾ ಕೋಟಿ,ಕೋಟಿ ಸಂಖ್ಯೆಯಲ್ಲಿ ಸಾಕಷ್ಟು ಮಿತಿಮಿರಿದೆ ಈ ನಿಟ್ಟಿನಲ್ಲಿ ಭಾರತದ ವರ್ತಮಾನದ
ಜನಸಂಖ್ಯೆ ವಿಸ್ಪೋಟದ ಒಂದು ಪರಿಣಾಮ ಇಂದು ಶಿಕ್ಷಣ ರಂಗದಲ್ಲಿ ಕಲಿಯುತ್ತಿರುವ ಮಕ್ಕಳ ಮೇಲಾಗಿದೆ. ಜನಸಂಖ್ಯೆಯ ವಿಪರೀತ ಹೆಚ್ಚಳದಿಂದ ಮಕ್ಕಳ ಶ್ರೇಯೋಭಿವೃದ್ಧಿಗೆ ಇದು ಕಂಟಕವಾಗಿ,ಕಳವಳಕಾರಿಯಾದ ಮತ್ತು ಆತಂಕಕಾರಿ ಸಂಗತಿಯಾಗಿದೆ ಎಂದರು.
ಕರ್ನಾಟಕ ರಾಜ್ಯದ ಅಸಂಖ್ಯಾತ ಶಾಲಾ-ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ಇಂದು ಲಕ್ಷ-ಲಕ್ಷ ಸಂಖ್ಯೆಯಲ್ಲಿ ಮಕ್ಕಳು ವಿದ್ಯಾಭ್ಯಾಸದೊಂದಿಗೆ ವ್ಯಾಸಂಗ ಮಾಡುತ್ತಿದ್ದಾರೆ.ಹಾಗೆ ಇಷ್ಟೇ ಸಂಖ್ಯೆಯಲ್ಲಿ ಕೂಡಾ ಈಗಾಗಲೇ ಅನೇಕ ಮಕ್ಕಳು ಪದವಿ ಪಡೆದು ಉತ್ತೀರ್ಣರಾಗಿರುವ ಅನೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೂಡಾ ತಮ್ಮ ಜೀವನದ ಭದ್ರತೆಗಾಗಿ ಕ್ಷಣಕ್ಷಣಕ್ಕೂ ಹಂಬಲಿಸುತಿದ್ದಾರೆ.
ಪ್ರಸ್ತುತ ಸರಕಾರಿ ಉದ್ಯೋಗಕ್ಕಾಗಿ ರಾಜ್ಯದಲ್ಲಿನ ಶಿಕ್ಷಣವಂತರು, ಪದವಿಧರರು ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ.ಕರ್ನಾಟಕ ರಾಜ್ಯದಲ್ಲಿ ಈಗ ಕಲಿತ,ಕಲಿಯಿತ್ತಿರುವ ಎಲ್ಲಾ ಮಕ್ಕಳಿಗೆ ಸರಕಾರಿ ಸೇವೆ ಮಾಡುವ ಅವಕಾಶ ಸಿಗುವುದು ಬಹು ಕಗ್ಗಂಟಿನ ಮತ್ತು ಜಟಿಲವಾದ ಪ್ರಶ್ನೆಯಾಗಿದೆ. ಇಂದಿನ ಸ್ಪರ್ಧಾತ್ಮಕವಾದ ಸಂಘರ್ಷಮಯವಾದ ದಾರಿಯಲ್ಲಿ ಸರಕಾರಿ ನೌಕರಿಯ ಸೌಲಭ್ಯ ಸಿಗುವುದು ಅಪರೂಪವಾಗಿದೆ. ಅತ್ಯುನ್ನತ ಶ್ರೇಣಿಯಲ್ಲಿ ಮತ್ತು ರಾಜ್ಯ ಮಟ್ಟದ ಪರೀಕ್ಷಾ ಸ್ಪರ್ಧೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ದೊರಕುವುದು.
ಹಾಗಾಗಿ ವಿದ್ಯಾರ್ಥಿಗಳ ಭದ್ರ ಭವಿಷ್ಯದ ಜೀವನಕ್ಕೆ ಮಾರಕವಾಗಿರುವ ಅಂಶಗಳನ್ನು ತಕ್ಕಮಟ್ಟಿಗೆ ತಗ್ಗಿಸಬೇಕಾದರೆ ಮಕ್ಕಳಿಗೆ -ಈಗೀನ ಭಾರತದ ಪ್ರಧಾನಿಯವರ ಕರೆ ಕೊಟ್ಟಂತೆ ಬದುಕಲು ಸಮಾಜದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಕೌಶಲ್ಯಗಳನ್ನು ಕಲಿಸಬೇಕು. ಕೌಶಲ್ಯಗಳನ್ನು ಕಲಿಸುವದೆಂದರೇ, ಅದು ಮಕ್ಕಳಿಗೆ ನಾವು ಭವಿಷ್ಯದಲ್ಲಿ ಆಸ್ತಿ-ಅಂತಸ್ತಿನೊಂದಿಗೆ ಅವರಿಗೆ ಜೀವದಾನ ನೀಡಿದಂತೆ ಎಂದರು.
ಇನ್ನೂ ಬಿಜೆಪಿ ಮುಖಂಡ ಅನಿಲ ಜಮಾದಾರ, ರಮೇಶ್ ಬೆಲ್ಲದ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ರೂಗಿ,ಕಾಂಗ್ರೆಸ್ ಮುಖಂಡ ಧರ್ಮರಾಜ ವಾಲಿಕಾರ, ರೇವಣ್ಣಸಿದ್ದ ಪೂಜಾರಿ,ಪೈಗಂಬರ ಅಂಗಡಿ, ಸಂಗಮೇಶ ಬಿರಾದಾರ,ಮಾಳಪ್ಪ ನಿಂಬಾಳ, ಮೋದಿನಸಾಬ್ ಬಾಗವಾನ, ಜಟ್ಟಪ್ಪ ಸಾಲೋಟಗಿ, ಜಟ್ಟಪ್ಪ ಮರಡಿ, ಜಟ್ಟಪ್ಪ ಮೂಲಿಮನಿ, ಭೀಮರಾಯ ಜೇವೂರ,ಭೀಮರಾಯ ಉಪ್ಪಾರ, ಲಕ್ಷ್ಮಣ ಡಂಗಿ, ಬಾಬುರಾಯ್ ಮಾವಿನಹಳ್ಳಿ, ಗುರಪ್ಪ ಅಗಸರ, ಇಲಾಯಿ ಬಾಗವಾನ, ನಿಂಗಪ್ಪ ತಳವಾರ, ಸಂಜೀವ ರೂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಾಧ್ಯಕ್ಷ ಶಂಕರಲಿಂಗ ಜಮಾದಾರ ಸ್ವಾಗತಿಸಿದರೆ, ಶಿಕ್ಷಕ ಆನಂದ ವಾಲಿಕಾರ ನಿರೂಪಿಸಿ ವಂದಿಸಿದರು.