ಇಂಡಿ : ಕಾಲುವೆ ನೀರು ಕಟ್ ತೊಗರಿ ಬೆಳೆಗಾರರು ಕಂಗಾಲು..!
ಇಂಡಿ: ತಾಲೂಕಿನ ಇಂಡಿ ಶಾಖಾ ಕಾಲುವೆಯ ಉಪ ಕಾಲುವೆಯಲ್ಲಿ ಸಧ್ಯ ನೀರಿನ ಹರಿವು ಕಟ್ ಆಗಿದೆ. ಪರಿಣಾಮ ಈ ನೀರನ್ನೆ ಅವಲಂಬಿಸಿದ ತೊಗರಿ ಬೆಳೆಗಾರರು ನೀರಿಲ್ಲದೆ ಕಂಗಾಲಾಗಿದ್ದಾರೆ.
ಹೌದು, ತಾಲೂಕಿನಲ್ಲಿ ಈ ವರ್ಷ ಅಪಾರ ಪ್ರಮಾಣದ ತೊಗರಿ ಬೆಳೆ ಇದೆ. ಆರಂಭದಲ್ಲಿ ತಕ್ಕ ಮಳೆಯಾದ ಪರಿಣಾಮ ಈ ಬೆಳೆ ಇಲ್ಲಿಯವರೆಗೆ ಚೆನ್ನಾಗಿ ಬೆಳೆದಿತ್ತು. ಈಗ ತೊಗರಿ ಬೆಳೆ ಹೂ, ಕಾಯಿ ಕಟ್ಟುವ ಹಂತದಲ್ಲಿದೆ. ಸಧ್ಯ ಮಳೆ ಕೈಕೊಟ್ಟಿದೆ. ಕಾಲುವೆ ನೀರಾದರೂ ಬಿಟ್ಟು ಬೆಳೆ ಉಳಿಸಿಕೊಳ್ಳಬೇಕು ಎಂದರೆ ಕಾಲುವೆ ನೀರು ಕೈಕೊಟ್ಟಿದೆ. ಇದರಿಂದಾಗಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಬಡವರ ಬೆಳೆ ತೊಗರಿ ಬೆಳೆ ಕಡಿಮೆ ನೀರಿನಲ್ಲಿ ಉತ್ತಮ ಇಳುವರಿ ಪಡೆಯುವ ಬೆಳೆ. ಈಗಾಗಲೆ ರೈತರು ಬೀಜಕ್ಕೆ, ಗೊಬ್ಬರಕ್ಕೆ, ಕೀಟಗಳ ಬಾಧೆ ತಡೆಯಲು ಕ್ರಿಮಿನಾಶಕಕ್ಕೆ, ಎಡೆ ಹೊಡೆಯಲು, ಕಳೆ ತೆಗೆಯಲು ಸಾಕಷ್ಟು ಖರ್ಚು ಮಾಡಿದ್ದಾರೆ. ಇನ್ನೆನು ಬೆಳೆ ಹೂ, ಕಾಯಿ ಕಟ್ಟುವ ಹಂತದಲ್ಲಿದೆ. ಕಾಲುವೆಯ ಮೂಲಕ ಹರಿಯುವ ಕೃಷ್ಣೆಯ ನೀರನ್ನು ಬಿಟ್ಟು ಬೆಳೆ ಬೆಳೆಯಬೇಕು ಎನ್ನುವಷ್ಟರಲ್ಲಿ ನೀರು ಕೈಕೊಟ್ಟಿದೆ. ರೈತರು ಕಂಗಾಲಾಗಿದ್ದಾರೆ. ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ, ಸಂಬಂಧಸಿದ ಅಧಿಕಾರಿಗಳು ಮೇಲಾಧಿಕಾರಿಗಳ ಸೂಚನೆಯತ್ತ ಚಿತ್ತ ಹರಿಸಿದ್ದಾರೆ.
ದೇವರು ವರ ಕೊಟ್ಟರೆ ಪೂಜಾರಿ ವರ ಕೊಡುತ್ತಿಲ್ಲ ಎಂಬಂತೆ, ಈ ಬಾರಿ ಕೃಷ್ಣಾ ತೀರದಲ್ಲಿ ಉತ್ತಮ ಮಳೆಯಾಗಿದೆ. ಆಲಮಟ್ಟಿ ಜಲಾಶಯ ಭರ್ತಿಯಾಗಿದೆ. ಕೆಳ ಭಾಗದ ಬಸವಸಾಗರ ಜಲಾಶಯವೂ ಭರ್ತಿಯಾಗಿದೆ. ಆದರೆ ಕಾಲುವೆಯಲ್ಲಿ ಮಾತ್ರ ನೀರಿಲ್ಲ. ಇದರಿಂದಾಗಿ ಸಧ್ಯ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಇನ್ನಾದರೂ ಸರ್ಕಾರ ಕೂಡಲೆ ಇತ್ತ ಗಮನಹರಿಸಿ ಬೇಗನೇ ಕಾಲುವೆ ನೀರು ಹರಿಸಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವದು ಎಂದು ಲಚ್ಯಾಣ, ಲೋಣ ,ಕೆ.ಡಿ, ಆಳೂರ, ಅಹಿರಸಂಗ, ಪಡನೂರ, ಬರಗೂಡಿ, ಮಾವಿನಹಳ್ಳಿ ಗ್ರಾಮದ ರೈತರು ಎಚ್ಚರಿಸಿದ್ದಾರೆ.