ಅಕ್ರಮವಾಗಿ ಪಡಿತರ ಅಕ್ಕಿ ಶೇಖರಣೆ :ಒಬ್ಬನ ಬಂಧನ
ವರದಿ: ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು:ತಾಲೂಕಿನ ದಿನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರದಿಂಬ ಗ್ರಾಮದ ಮನೆಯೊಂದರಲ್ಲಿ ಮಾರಾಟ ಮಾಡುವ ಉದ್ಧೇಶದಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿಯನ್ನು ಶನಿವಾರ ಆಹಾರ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಗ್ರಾಮದ ಗೋವಿಂದರಾಜು (40) ಬಂಧಿತ ಆರೋಪಿ. ಈತ ಅಕ್ರಮವಾಗಿ ಮಾರಾಟ ಮಾಡುವ ಉದ್ಧೇಶದಿಂದ ಗ್ರಾಮಗಳಲ್ಲಿ ಜನರಿಂದ ಪಡಿತರ ಅಕ್ಕಿಯನ್ನು ಖರೀದಿಸಿ ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ದಾಸ್ತಾನು ಮಾಡಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ತಾಲೂಕು ಪ್ರಭಾರ ಆಹಾರ ನಿರೀಕ್ಷಕ ವಿಷ್ಣುಮೂರ್ತಿ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ರಾಮಾಪುರ ಪೊಲೀಸರಿಗೆ ಮಾಹಿತಿ ತಿಳಿಸಿದರು. ಬಳಿಕ ವಿಷ್ಣುಮೂರ್ತಿ, ಸಬ್ ಇನ್ಸ್‍ಪೆಕ್ಟರ್ ಲೋಕೇಶ್, ಸಿಬ್ಬಂದಿಗಳಾದ ಶಿವರಾಮಯ್ಯ, ಮಹೇಂದ್ರ, ಲಿಯಾಖತ್ ಆಲಿಖಾನ್, ಮಕಂದಾರ್ ಹಾಗೂ ಅಮಗೊಂಡ ಬಿರಾದಾರ್ ತಂಡ ಮನೆಯ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸುವುದು ದೃಢಪಟ್ಟಿತು. 38 ಚೀಲಗಳಿಂದ 1,724 ಕೆ.ಜಿ ಪಡಿತರ ಅಕ್ಕಿ ಹಾಗೂ ಆರೋಪಿಯನ್ನು ವಶಕ್ಕೆ ಪಡೆದ ಆಹಾರ ಇಲಾಖೆಯ ನಿರೀಕ್ಷಕರು ಪ್ರಕರಣವನ್ನು ರಾಮಾಪುರ ಪೋಲಿಸ್ ಠಾಣೆಗೆ ಹಸ್ತಾಂತರಿಸಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.