ಐಸಿಸಿ ವಿಶ್ವಕಪ್ 2023; ಆಂಗ್ಲರಿಗೆ ಶಾಕ್ ನೀಡಿದ ನ್ಯೂಜಲೆಂಡ್
ವೈಸ್ ಆಫ್ ಜನತಾ ನ್ಯೂಸ್ ಡೆಸ್ಕ್ : ಡೆವೋನ್ ಕಾನ್ವೇ (152*) ಹಾಗೂ ರಚಿನ್ ರವೀಂದ್ರ (123*) ಅವರ ಸ್ಪೋಟಕ ಶತಕಗಳ ಬಲದಿಂದ ನ್ಯೂಜಿಲೆಂಡ್ ತಂಡ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ 50 ಓವರ್‌ಗಳ ಮಹತ್ವದ ಟೂರ್ನಿಯಲ್ಲಿ ಕಿವೀಸ್ ಶುಭಾರಂಭ ಕಂಡಿದೆ.
ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದ ನ್ಯೂಜಿಲೆಂಡ್ ಹಂಗಾಮಿ ನಾಯಕ ಟಾಮ್ ಲೇಥಮ್ ಅವರ ಯೋಜನೆಯನ್ನು ಸಹ ಆಟಗಾರರು ಯಶಸ್ವಿಗೊಳಿಸಿದರು. ಮೊದಲು ಬ್ಯಾಟ್ ಮಾಡುವಂತಾಗಿದ್ದ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವಲ್ಲಿ ಕಿವೀಸ್ ಬೌಲರ್‌ಗಳ ಸಕ್ಸಸ್ ಆದರು. ಇದರ ಫಲವಾಗಿ ಇಂಗ್ಲೆಂಡ್ 50 ಓವರ್‌ಗಳನ್ನು ಪೂರ್ಣಗೊಳಿಸಿದರೂ 9 ವಿಕೆಟ್ ನಷ್ಟಕ್ಕೆ 282 ರನ್‌ಗಳಿಗೆ ಸೀಮಿತವಾಗಿತ್ತು.
ಕಿವೀಸ್ ವೇಗಿ ಮ್ಯಾಟ್ ಹೆನ್ರಿ 3 ವಿಕೆಟ್ ಪಡೆದರೆ, ಗ್ಲೆನ್ ಫಿಲಿಪ್ಸ್ ಹಾಗೂ ಮಿಚೆಲ್ ಸ್ಯಾಂಟ್ನರ್ ಅವರು ತಲಾ ಎರಡೆರಡು ವಿಕೆಟ್‌ಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್ ತಂಡದ ರನ್ ಶಿಖರಕ್ಕೆ ಕಡಿವಾಣ ಹಾಕಿದ್ದರು. ಇಂಗ್ಲೆಂಡ್ ಪರ ಜೋ ರೂಟ್ 86 ಎಸೆತಗಳಲ್ಲಿ 77 ರನ್ ಗಳಿಸಿ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಆದರೆ, ಜಾನಿ ಬೈರ್‌ಸ್ಟೋವ್ (33) ಹಾಗೂ ಜೋಸ್ ಬಟ್ಲರ್ (43) ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. ಇನ್ನುಳಿದಂತೆ ಡಾವಿಡ್ ಮಲಾನ್, ಮೊಯೀನ್ ಅಲಿ, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಇಂಗ್ಲೆಂಡ್: 50 ಓವರ್‌ಗಳಿಗೆ 282-9 (ಜೋ ರೂಟ್ 77, ಜೋಸ್ ಬಟ್ಲರ್ 43, ಜಾನಿ ಬೈರ್‌ಸ್ಟೋವ್ 33; ಮ್ಯಾಟ್ ಹೆನ್ರಿ 43ಕ್ಕೆ 3, ಮಿಚೆಲ್ ಸ್ಯಾಂಟ್ನರ್ 37ಕ್ಕೆ 2, ಗ್ಲೆನ್ ಫಿಲಿಪ್ಸ್ 17ಕ್ಕೆ 2)
ನ್ಯೂಜಿಲೆಂಡ್: 36.2 ಓವರ್‌ಗಳಿಗೆ 283-1 (ಡೆವೋನ್ ಕಾನ್ವೇ 152*, ರಚಿನ್ ರವೀಂದ್ರ 123*; ಸ್ಯಾಮ್ ಕರನ್ 47ಕ್ಕೆ 1)