ರಾಯಚೂರು : ನಾನೇ ಅರ್ಜುನ, ಬಬ್ರುವಾಹನ ಎಂದು ವೇಷ ಹಾಕಿಕೊಂಡು ನಾಟಕ ಮಾಡುವ ಆಡಳಿತದಿಂದ ಇಡೀ ನಗರಸಭೆ ಸಾರ್ವಜನಿಕರ ಮಧ್ಯೆ ಭಾರೀ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ಸದಸ್ಯರಾದ ಜಯಣ್ಣ ಅಸಮಧಾನ ವ್ಯಕ್ತಪಡಿಸಿದರು.
ಕುಡಿವ ನೀರಿಗೆ ಸಂಬಂಧಿಸಿದಂತೆ ಇಂದು ಕರೆಯಲಾದ ತುರ್ತು ಸಾಮಾನ್ಯ ಸಭೆಯಲ್ಲಿ ಸುಧೀರ್ಘವಾಗಿ ಮಾತನಾಡಿದ ಅವರು, ನಗರಸಭೆ ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ ಮತ್ತು ಯಾರದೋ ಮೂಗಿನ ನೇರಕ್ಕೆ ಆಡಳಿತ ನಿರ್ವಹಣೆ ಬಿಟ್ಟು ಅಧ್ಯಕ್ಷರ ಆದೇಶ ಮತ್ತು ಪರಿಮಿತಿಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಆಪತ್ಕಾಲದಲ್ಲಿ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತಹ ಆಡಳಿತ ನಡೆಸದಿದ್ದರೇ, ಇಂತಹ ಅವಘಡಗಳಿಗೆ ಅವಕಾಶಗಳು ನೀಡಿದಂತಾಗುತ್ತದೆಂದು ಎಚ್ಚರಿಸುತ್ತಾ, ಕಳೆದ ಮೇ.೨೯ ರಿಂದ ನಿನ್ನೆವರೆಗೂ ನಡೆದಂತಹ ಒಂದು ಅವಘಡ ಕರಾಳ ಅನುಭವಕ್ಕೆ ಕಾರಣವಾಗಿದೆ. ಸುಧೀರ್ಘ ಕಾಲದ ಆಡಳಿತದಲ್ಲೂ ಈ ರೀತಿಯ ತೊಂದರೆ ಆಗಿರಲಿಲ್ಲ. ಬೇಸಿಗೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ನೀರು ನೀಡಲೇಬೇಕಾದಂತಹ ತುರ್ತು ಪರಿಸ್ಥಿತಿಯಲ್ಲಿ ಕಾಲುವೆ ನೀರು ಸೆಟ್ಲಿಂಗ್ ಟ್ಯಾಂಕ್‌ಗೆ ಬಿಡದೇ, ನೇರವಾಗಿ ಶುದ್ಧೀಕರಣದಿಂದ ಪೂರೈಕೆ ಮಾಡಿದಂತಹ ಘಟನೆಗಳ
ಈ ರೀತಿಯ ಅವಘಡ ಸಾವು, ನೋವು ಸಂಭವಿಸಿರಲಿಲ್ಲ.
ರಾಂಪೂರು ಜಲಾಶಯದಲ್ಲಿ ಎರಡು ಶುದ್ಧೀಕರಣ ಘಟಕಗಳಿವೆ. ಒಂದು ಹಳೆಯದು, ಇನ್ನೊಂದು ಹೊಸದು. ೨೦೧೪ ರಲ್ಲಿ ಮ್ಯಾಕ್ರೋ ಅನುದಾನದಲ್ಲಿ ೪.೭೫ ಕೋಟಿ ವೆಚ್ಚದಲ್ಲಿ ೨೦೧೪-೧೫ ರ ಸಾಲಿನಲ್ಲಿ ಹೊಸ ಶುದ್ಧೀಕರಣ ಘಟಕ ನಿರ್ಮಿಸಲಾಯಿತು. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಮತ್ತು ಎ.ಮಾರೆಪ್ಪ ಅವರು ಅಧ್ಯಕ್ಷರಾಗಿದ್ದ ಎರಡು ಅವಧಿಯಲ್ಲಿ ನಾನು ನಿರ್ವಹಣಾ ಅಧ್ಯಕ್ಷರಾಗಿದ್ದೆ. ಬ್ಲಿಚಿಂಗ್ ಮಾಡುವ ವ್ಯವಸ್ಥೆ ಕ್ರಮ ಬದ್ಧವಾಗಿ ನಡೆಸಲಾಗುತ್ತಿತ್ತು.
ಡಿ ಗ್ರೂಪ್ ಅಧಿಕಾರಿಗಳು ಬ್ಲಿಚಿಂಗ್ ಯಾವ ರೀತಿ ಮಾಡಬೇಕೆಂಬ ಮಾಹಿತಿಯಿಲ್ಲದಿದ್ದರೂ, ಹರಿಯುವ ನೀರಿನಲ್ಲಿಯೇ ಬ್ಲಿಚಿಂಗ್ ಮತ್ತು ಆಲಂ ಮೂಲಕ ನೀರು ಶುದ್ಧೀಕರಣಗೊಳಿಸಲಾಗುತ್ತಿತ್ತು. ರಾಂಪೂರಿನಲ್ಲಿ ಇರುವ ವ್ಯವಸ್ಥೆಯನ್ನು ಪ್ರತಿಯೊಬ್ಬರು ಗಮನಿಸಬೇಕಾಗಿದೆ.
ಕಾಲುವೆಯಿಂದ ನೀರು ನೇರವಾಗಿ ಸಾರ್ವಜನಿಕರಿಗೆ ಬಿಡದೇ, ಅಲ್ಲಿರುವ ಕೆರೆಗಳಲ್ಲಿ ಸಂಗ್ರಹಿಸಲಾಗುತ್ತದೆ. ಈ ಕೆರೆಯ ನೀರು ಶುದ್ಧೀಕರಣ ಘಟಕದ ಮೂಲಕ ಸಾರ್ವಜನಿಕರಿಗೆ ಪೂರೈಕೆ ಮಾಡಲಾಗುತ್ತದೆ. ಈ ವ್ಯವಸ್ಥೆ ಕೃಷ್ಣಾ ಜಾಕ್ವೇಲ್‌ನಲ್ಲಿ ಇಲ್ಲ ಎನ್ನುವುದು ಮತ್ತೊಂದು ಗಮನಾರ್ಹವಾಗಿದೆ. ಎರಡು ಶುದ್ಧೀಕರಣ ಘಟಕಗಳಲ್ಲಿ ಹೊಸ ಶುದ್ಧೀಕರಣ ಘಟಕದ ನಿರ್ವಹಣೆ ನಿರ್ಲಕ್ಷ್ಯ ಇಂದು ಈ ದುರಂತಕ್ಕೆ ಕಾರಣವಾಗಿದೆ.
ಹೊಸ ಶುದ್ಧೀಕರಣದ ಕಾರ್ಯಕ್ಷಮತೆಯನ್ನು ೨೦-೨-೨೦೧೮ ರಲ್ಲಿ ಪ್ರಾಯೋಗಿಕ ನಿರ್ವಹಣೆ ಮಾಡಲಾಯಿತು. ಮೂರು ತಿಂಗಳ ಕಾಲ ಇದೇ ಘಟಕದಿಂದ ನಗರಕ್ಕೆ ನೀರು ಕೊಡಲಾಯಿತು. ನಂತರ ಕರ್ನಾಟಕ ನಗರ ನೀರು ಮತ್ತು ನೈರ್ಮಲ್ಯ ಅಭಿವೃದ್ಧಿ ವಿಭಾಗದಿಂದ ೨೦-೭-೨೦೧೮ ರಂದು ಈ ಘಟಕವನ್ನು ಹಸ್ತಾಂತರ ಮಾಡಿಕೊಳ್ಳಲು ನಗರಸಭೆಗೆ ಪತ್ರ ಬರೆಯಲಾಗಿತ್ತು.
ಆದರೆ, ಈ ಪತ್ರಕ್ಕೆ ನಗರಸಭೆಯಿಂದ ೨೧ ತಿಂಗಳ ನಂತರ ಅಂದರೇ, ೨೭-೦೪-೨೦೨೦ ರಲ್ಲಿ ಉತ್ತರ ಬರೆದು, ಈ ಯೋಜನೆಯಲ್ಲಿ ಕ್ರಿಯಾಲೋಪಗಳಿರುವುದರಿಂದ ದುರಸ್ತಿ ಮಾಡಿದ ನಂತರ ಇದನ್ನು ಹಸ್ತಾಂತರಿಸಿಕೊಳ್ಳಲಾಗುತ್ತದೆಂದು ಅಂದಿನ ಆಯುಕ್ತ ದೇವಾನಂದ ದೊಡ್ಡಮನಿ ಅವರು ಪತ್ರ ಬರೆದಿದ್ದರು. ನಂತರ ೨೦೨೦ ಏಪ್ರೀಲ್, ಮೇ, ಜೂನ್ ತಿಂಗಳಲ್ಲಿ ಪುನಃ ಪತ್ರ ವ್ಯವಹಾರ ನಡೆಯಿತು.
ನಗರಸಭೆ ವಿಳಂಬ ಪ್ರತಿಕ್ರಿಯೆಯಿಂದಾಗಿ ಕರ್ನಾಟಕ ನಗರ ಕುಡಿವ ನೀರು ವಿಭಾಗ ನಗರಸಭೆಗೆ ಮತ್ತೊಂದು ಪತ್ರ ಬರೆದು, ಹಸ್ತಾಂತರಕ್ಕೆ ಸಂಬಂಧಿಸಿ ನಮ್ಮ ಪತ್ರಕ್ಕೆ ೨೧ ತಿಂಗಳು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಕ್ರಿಯಾಲೋಪಗಳ ದುರಸ್ತಿಗಾಗಿ ನಗರಸಭೆಯಿಂದ ಅನುದಾನ ನೀಡಬೇಕೆಂದು ೫೮ ಲಕ್ಷ ರೂ.ಗಳ ಅಂದಾಜು ವೆಚ್ಚ ಕಳುಹಿಸಲಾಗಿತ್ತು. ಈ ಘಟಕವನ್ನು ಇನ್ನಾದರೂ ಸಕ್ರಿಯಗೊಳಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಈ ಎಲ್ಲಾ ಮಾಹಿತಿಯನ್ನು ಇಲ್ಲಿ ಆಡಳಿತ ನಿರ್ವಹಿಸುವವರು ಹೊಂದಿರಬೇಕು.
ಆದರೆ,ಇಲ್ಲಿ ನಾನೇ ಅರ್ಜುನ, ಬಬ್ರುವಾಹನ ಎನ್ನುವ ರೀತಿಯಲ್ಲಿ ನಾಟಕ ನಡೆದಿದೆ. ಇವರಿಗೆ ಯಾರು ಏನು ಹೇಳುವ ಅವಕಾಶಗಳೇ ಇಲ್ಲದಂತಾಗಿದೆ.
ಆಲಂ, ಬ್ಲಿಚಿಂಗ್ ಇಲ್ಲದಿದ್ದರೇ, ನೀರು ನಿರ್ವಹಣೆ ಕಿರಿಯ ಅಭಿಯಂತರರಾಗಲಿ, ಅಧಿಕಾರಿಗಳಾಗಲಿ ಏನು ಮಾಡಬೇಕು. ಇಂತಹ ಅವಘಡಗಳಿಗೆ ನಾವೆಲ್ಲರೂ ಪಾಲುದಾರರೇ ಎನ್ನುವುದು ಮರೆಯಬಾರದು. ಸೇಡು ಮತ್ತು ಹಸ್ತಕ್ಷೇಪದ ರಾಜಕೀಯ ತಡೆಯುವ ಅಗತ್ಯವಿದೆ. ಅಧಿಕಾರದ ಬಲ, ಶಕ್ತಿ, ಪಾಂಡಿತ್ಯ ಇದೆ ಎಂದು ನವೋದಯ ಇಂಜಿನಿಯರ್ ಕಾಲೇಜು ಸೇರಿದಂತೆ ಪ್ರಶ್ನಿಸುವವರ ಸಂಸ್ಥೆಗಳಿಗೆ ನೀರು ಕಟ್ಟು ಮಾಡುವಂತಹ ವ್ಯವಸ್ಥೆ ದುರುದ್ದೇಶಪೂರಕ ಎನಿಸುತ್ತದೆ.
ಈ ರೀತಿಯ ದುರುದ್ದೇಶ ಆಡಳಿತದ ಬಗ್ಗೆ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಸದಸ್ಯರು ಹುದ್ದೆಯ ಗಾಂಭೀರ್ಯತೆಯನ್ನು ಮನವರಿಕೆ ಮಾಡಿಕೊಂಡು ಹಸ್ತಕ್ಷೇಪವಿಲ್ಲದೇ, ಆಡಳಿತ ನಡೆಯಬೇಕು. ಇಲ್ಲದಿದ್ದರೇ ನಾವು ಆಡಳಿತಪೂರಕವಾಗಿ ಉತ್ತರಿಸಬೇಕಾಗುತ್ತದೆ.
ಗಂಭೀರ ವಿಷಯ ಬಂದಾಗ ಸದಸ್ಯರ ಮಾಹಿತಿ ಪಡೆಯಬೇಕು. ಯಾರ ಅಧಿಕಾರ, ಯಾರು ಅತಿಕ್ರಮಿಸಿದಂತೆ ಆಯುಕ್ತರು ಈ ನಗರಸಭೆಯ ಮುಖ್ಯಸ್ಥರಾಗಿ ಕಾನೂನಾತ್ಮಕ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.