ಹುಬ್ಬಳ್ಳಿ: ತಣ್ಣಗಿದ್ದ ಹುಬ್ಬಳಿ ಕೇವಲ ಒಂದು ವಾಟ್ಸಪ್ ಮೆಸೇಜ್ ಅಹಿತಕರ ಘಟನೆಗೆ ಕಾರಣವಾಗಿ ಹಲವು ಅವಾಂತರಗಳನ್ನ ಸೃಷ್ಟಿಸಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 105 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ಆರೋಪಿಗಳ ಪತ್ತೆಗೆ 8 ಪೊಲೀಸ್ ತಂಡ ರಚಿಸಲಾಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಬೃಹತ್ ಸಂಖ್ಯೆಯಲ್ಲಿ ಜನರು ಒಟ್ಟು ಸೇರಿರುವುದು ಮತ್ತು ಕಲ್ಲು ಗಳ ರಾಶಿ ಪೊಲೀಸರನ್ನು ಚಕಿತಗೊಳಿಸಿದೆ. ಇದು ವ್ಯವಸ್ಥಿತ ಸಂಚಿನ ಭಾಗ ಎಂಬ ಸಂಶಯ ತಲೆದೋರಿದೆ. ಇದೀಗ ಹಳೆ ಹುಬ್ಬಳ್ಳಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಅಲ್ಲದೆ ಬಂಧಿಸಿರುವ ಆರೋಪಿಗಳನ್ನು ಇಂದು ನ್ಯಾಯಲಯಕ್ಕೆ ಒಪ್ಪಿಸುವ ಸಾಧ್ಯತೆ ಇದೆ.