ಆರೋಗ್ಯವೇ ಭಾಗ್ಯ :ದಯಾನಂದ ಸ್ವಾಮಿ
ಇಂಡಿ : ಮನುಷ್ಯ ಆರೋಗ್ಯವಾಗಿ ಬದುಕಬೇಕಾದರೆ ಸದೃಢವಾದ ಶರೀರ ಎಷ್ಟು ಅವಶ್ಯವೂ, ಆತನ ಆರೋಗ್ಯವು ಉತ್ತಮ ಸ್ಥಿತಿಯಲ್ಲಿರುವುದು ಅಷ್ಟೇ ಮುಖ್ಯವಾಗಿದೆ.ಅದಕ್ಕಾಗಿ ಆರೋಗ್ಯವೇ ಭಾಗ್ಯ ಎಂಬಂತೆ ನಾವು ಜೀವನದಲ್ಲಿ ಇದನ್ನು ಅಳವಡಿಸಿಕೊಂಡು ಬಾಳಿ ಬದುಕಬೇಕಾಗಿದೆ ಎಂದು ಹಿರೇಬೇವನೂರ ಗ್ರಾಮದ ಹಿರೇಮಠದ ದಯಾನಂದ ಸ್ವಾಮಿಗಳು ಹೇಳಿದರು.
ಅವರು ಇಂಡಿ ಪಟ್ಟಣದ ಮಾಳಿ ದವಖಾನೆಯಲ್ಲಿ ಹಿರೇಬೇವನೂರ ಗ್ರಾಮದ ಭೀಮಾಶಂಕರ ವಡ್ಡರ ಇವರ ಚಿ. ಶ್ರೀವಿಜಯ ಈತನ 7ನೇ ವರ್ಷದ ಜನ್ಮ ದಿನಾಚರಣೆ ನಿಮಿತ್ತವಾಗಿ ಮಾಳಿ ದವಾಖಾನೆಯಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಸಾನಿಧ್ಯ ವಹಿಸಿ ಮಾತನಾಡಿದರು.
ಗ್ರಾಮದ ಇನ್ನೋರ್ವ ವೈದ್ಯ ಡಾ ಸಿದ್ದು ಪರಗೊಂಡ ಮಾತನಾಡಿ, ಖ್ಯಾತ ರಾಜ್ಯಶಾಸ್ತ್ರಜ್ಞ ಅರಿಸ್ಟಾಟಲ್ ಹೇಳಿದಂತೆ ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ಇರುತ್ತದೆ ಎಂಬಂತೆ ಒಳ್ಳೆಯ ಮನಸ್ಸು ನಮ್ಮಲ್ಲಿರಬೇಕಾದರೆ ಮೊದಲು ನಾವು ಒಳ್ಳೆಯ ಆರೋಗ್ಯವಂತ ವ್ಯಕ್ತಿಯಾಗಿ ಬಾಳಬೇಕಾಗುತ್ತದೆ. ಅದಕ್ಕಾಗಿ ನಾವು ಪ್ರತಿನಿತ್ಯ ನಮ್ಮ ಆರೋಗ್ಯದ ಕುರಿತು ಜಾಗೃತಿ ವಹಿಸಿ, ಆಗಾಗ ತಪಾಸಣೆ ಮಾಡಿಸುತ್ತಿರಬೇಕು. ಅಂದಾಗ ಮಾತ್ರ ನಾವು ಬಹಳ ದಿನಗಳ ವರೆಗೆ ಬದುಕಬಹುದಾಗಿದೆ ಎಂದರು.
ದವಾಖಾನೆಯ ವೈದ್ಯರಾದ ಡಾ ರಾಜಕುಮಾರ ಮಾಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆರ್ ವಿ ಪಾಟೀಲ ಶಿಕ್ಷಕರು, ಬಾಳು ಮುಳುಜಿ, ಗಿರೀಶ ಪಾಟೀಲ, ಬಸವರಾಜ ಮೇತ್ರಿ, ಸಿದ್ದರಾಯ ಅಪ್ತಾಗಿರಿ, ಸೋಮಶೇಖರ ಪಾತಾಳಿ,ಪಂಡಿತ ಬಿರಾದಾರ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ವೈದ್ಯರಾದ ಡಾ ಶರತ್, ಡಾ ಶುಭಂ, ಡಾ ನೇಹಾರ, ಸಿದ್ದು ನಾವಿ, ಸಂತೋಷ ಗವಳಿ, ಜಟ್ಟು ಮರಡಿ, ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭೀಮಾಶಂಕರ ವಡ್ಡರ ಅವರು ತಮ್ಮ ಪುತ್ರನ ಜನ್ಮದಿನಾಚರಣೆಯ ನಿಮಿತ್ತವಾಗಿ ಏರ್ಪಡಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಸುಮಾರು ಮೂರು ನೂರಕ್ಕಿಂತ ಹೆಚ್ಚಿನ ರೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆದುಕೊಂಡರು.
ಪ್ರತಿ ವರ್ಷ ಹುಟ್ಟು ಹಬ್ಬದ ನಿಮಿತ್ಯವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಅನಾಥಾಶ್ರಮ ಮಕ್ಕಳಿಗೆ ಸೇವೆ, ಪ್ರತಿ ವರ್ಷ ಇಬ್ಬರು ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಪ್ರತಿ ವರ್ಷ ಬಡ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ, ಈ ವರ್ಷ 15ಕ್ಕೂ ಹೆಚ್ಚು ರೋಗಿಗಳು ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲಿದ್ದಾರೆ. ಇದರೊಂದಿಗೆ ವಿವಿಧ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ತಮ್ಮ ಪುತ್ರನ ಜನ್ಮ ದಿನಾಚರಣೆ ಆಚರಿಸುತ್ತಿದ್ದಾರೆ.


















