ವಿಜಯಪುರದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆದ ಗುರುವಂದನಾ ಸಮಾರಂಭ
ವಿಜಯಪುರ : ಉತ್ತರ ಕರ್ನಾಟಕದಲ್ಲಿ ಹಂಡೇ ವಜೀರ ಗುರು ಪೀಠದ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಾಗುವುದು ಎಂದು
ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚೆನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿಜಿ ಹೇಳಿದರು.
ವಿಜಯಪುರದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನೋತ್ಸವ ಹಾಗೂ ಗುರು ವಂದನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಹಂಡೇ ವಜೀರ ಸಮಾಜಕ್ಕೂ ಹಾಗೂ ನಿಡುಮಾಮಿಡಿ ಮಠಕ್ಕೂ ತಾಯಿ ಮಕ್ಕಳ ಸಂಬಂಧ, ಆ ರೀತಿಯ ಅಂತಃಕರಣವಿದೆ ಎಂದರು.
ಹಂಡೇ ವಜೀರ ರಾಜರು ಮೂರು ಚಿನ್ನದ ಶಾಸನಗಳನ್ನು ನಿಡುಮಾಮಿಡಿ ಪೀಠಕ್ಕೆ ನೀಡಿದ್ದರು, ಎದುರಾಳಿ ರಾಜರು ನಡೆಸಿದ ದಾಳಿಗಳಲ್ಲಿ ಎರಡು ಶಾಸನಗಳು ಅವರ ಪಾಲಾದವು ಎಂದರು.
ಜ.ಚ.ನಿ. ಗುರುಗಳು ತತ್ವ ಹಾಗೂ ಧಾರ್ಮಿಕ ಹಿರಿಮೆ ಹೆಚ್ಚಿಸಿ, ೩೦೦ ಕ್ಕೂ ಹೆಚ್ಚು ಗ್ರಂಥಗಳನ್ನು ಬರೆದು ಸಾಹಿತ್ಯ ಲೋಕಕ್ಕೆ ತಮ್ಮನ್ನು ತೊಡಗಿಸಿಕೊಂಡರು ಎಂದರು.
ಶಾಲೆಗಳೇ ಇಲ್ಲದ ಗ್ರಾಮಗಳಲ್ಲಿ ಶಾಲೆ ಆರಂಭಿಸಿದಾಗ ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ, ಈ ನೋವು ನನಗೂ ಕಾಡಿತು, ಆದರೆ ಇದು ನಮ್ಮ ಕರ್ತವ್ಯ ಎಂದು ಪರಿಭಾವಿಸಿ ಈ ಎಲ್ಲ ಸಂಸ್ಥೆಗಳನ್ನು ಅನೇಕ ಸವಾಲುಗಳನ್ನು ಎದುರಿಸಿ ಮುನ್ನಡೆಸಲಾಗುತ್ತಿದೆ ಎಂದರು.
ಹಿರಿಯರು ಸಾಮಾಜಿಕ ಸೇವೆಗಾಗಿ ಕಟ್ಟಿದ ಸಂಸ್ಥೆಗಳನ್ನು ಬದ್ದತೆಯಿಂದ ಮುನ್ನಡೆಸುವ ಜವಾಬ್ದಾರಿಯನ್ನು ಯುವಕರು ಬೆಳೆಸಿಕೊಳ್ಳಬೇಕು, ಸಮರ್ಪಣಾ ಮನೋಭಾವ, ತ್ಯಾಗ ಭಾವ ದಿಂದ ದುಡಿಯುವ ಬಳಗವಿದ್ದರೆ ಮಾತ್ರ ಸಂಸ್ಥೆಗಳು ಬೆಳವಣಿಗೆಯಾಗಲು ಸಾಧ್ಯ ಎಂದರು.
ಸೇವಾ ನಿವೃತ್ತರಾದವರು ನಿವೃತ್ತ ಜೀವನದಲ್ಲಿ ಟೈಂ ಪಾಸ್ ಮಾಡಬಾರದು, ಅವರು ಸಮಾಜಕ್ಕೆ ಅರ್ಪಿತವಾಗಿಕೊಂಡು ಮುನ್ನಡೆಯಬೇಕು, ಸೇವಾ ನಿವೃತ್ತರು ಆರ್ಥಿಕವಾಗಿ ಸಬಲರಾಗಿದ್ದರೆ ಉಚಿತವಾಗಿ ತಮ್ಮ ಜ್ಞಾನ ಧಾರೆ ಎರೆಯಬೇಕು, ಆರಾಮ ಇರೋಣ ಎಂದರೆ ಸೋಮಾರಿತನ ಬರುತ್ತದೆ, ಕಾಯಕವೇ ಆರಾಮ ಎಂದರು.
ಇಂದು ಎಲ್ಲ ಕಡೆಯಲ್ಲೂ ಮೌಲ್ಯ ಕೊರತೆ ಎದ್ದು ಕಾಣುತ್ತಿದೆ, ಪೊಳ್ಳು – ಜೊಳ್ಳು ವ್ಯಾಪಕವಾಗುತ್ತಿವೆ ಎಂದರು.
ಧೀಡಿರ್ ಶ್ರೀಮಂತರಾಗುವುದು ಆದರ್ಶವಲ್ಲ, ನ್ಯಾಯಯುತವಾಗಿ ದುಡಿದು ಶ್ರೀಮಂತನಾದರೆ ಅದು ಆದರ್ಶ, ಈ ಮನೋಭಾವ ವಿದ್ಯಾರ್ಥಿಗಳಲ್ಲಿ ಬಿತ್ತಬೇಕು ಎಂದರು.
ಜಾಗತೀಕರಣದಿಂದ ಸಾಂಸ್ಕೃತಿಕ ಪಲ್ಲಟ
ಬಡವರ ಬಗ್ಗೆ ಮಿಡಿಯುವ ಹೃದಯಗಳಿದ್ದವು, ಆದರೆ ಬಡವರ ಪರ ಮಿಡಿಯುವ ಹೃದಯಗಳೇ ಇಲ್ಲದಂತಾಗಿವೆ, ಆಗ ದೊಡ್ಡ ವಾಡೆಗಳು ಕಟ್ಟಿದರೂ ಆಗಿನ ಶ್ರೀಮಂತರು ಒಂದಿಷ್ಟು ಬಡವರ ಬಗ್ಗೆ ಕಳಕಳಿ ಹೊಂದಿದ್ದರು, ಈಗ ಆ ಕಳಕಳಿ ಇಲ್ಲ, ಪಾಶ್ಚಾತ್ಯೀಕರಣ ಹಾಗೂ ಜಾಗತೀಕರಣ ನಮ್ಮ ಸಂಸ್ಕೃತಿ ಆಪೋಷನ ಪಡೆದುಕೊಂಡು ಮಿಸ್ ಯೂನಿವರ್ಸ್ ಸ್ಪರ್ಧೆ ನಡೆಸಿ ನಮ್ಮ ಹೆಣ್ಣು ಮಕ್ಕಳ ಗೌರವಕ್ಕೆ ಕುತ್ತು ತರುವ ಕೆಲಸ ನಡೆಯುತ್ತಿದೆ ಎಂದರು.
ನಮ್ಮ ನಂಬಿಕೆ, ಸಂಸ್ಕೃತಿ, ಆಹಾರ ಪದ್ದತಿ ಎಲ್ಲವೂ ಬದಲಾಗಿದೆ, ಕ್ರಿಶ್ಚಿಯನ್ ಹೊಸ ವರ್ಷದ ಸಂದರ್ಭದಲ್ಲಿ ಅವರಿಗೆ ಶುಭಾಷಯ ಹೇಳೋಣ, ಆದರೆ ನಮ್ಮ ಯುಗಾದಿಯಲ್ಲಿ ಹೊಸ ವರ್ಷ ಆಚರಿಸೋಣ, ನಮ್ಮ ಆಚರಣೆ ಜೀವಂತವಾಗಿಸಿಕೊಳ್ಳೋಣ ಎಂದರು.
ದೀಪ ಹಚ್ಚುವುದು ನಮ್ಮ ಸಂಸ್ಕೃತಿ, ಆದರೆ ಕ್ಯಾಂಡಲ್ ಆರಿಸಿ ಜನ್ಮದಿನ ಆಚರಿಸಲಾಗುತ್ತಿದೆ, ಅದು ಪಾಶ್ಚಾತ್ಯರ ಸಂಸ್ಕೃತಿ, ಅದು ಅವರಿಗೆ ಸರಿ ಇರಬಹುದು, ಆದರೆ ನಮ್ಮದು ದೀಪ ಆರಿಸುವ ಸಂಸ್ಕೃತಿ ನಮ್ಮದಲ್ಲ ಎಂದರು. ಹ್ಯಾಪಿ ಬರ್ಥ ಡೇ ಎಂದು ಹೇಳಿ ಆದರೆ ಕ್ಯಾಂಡಲ್ ಆರಿಸುವ ಬದಲು ಕ್ಯಾಂಡಲ್ ಹೊತ್ತಿಸಿ ಎಂದರು.
ನಮ್ಮ ಸಂಸ್ಕೃತಿ ಉಳಿಸಿಕೊಂಡು ಹೋಗದೇ ಹೋದರೆ ನಮಗೆ ನಾವೇ ಅನ್ಯಾಯ ಮಾಡಿಕೊಂಡಂತೆ ಎಂದರು.
ಆಧುನೀಕರಣ ಮಾಯೆಯಲ್ಲಿ ಅಂತಃಕರಣ ಮಾಯ.
ಉಪನ್ಯಾಸ ಮಂಡಿಸಿದ ಕನ್ನಡ ಅಧ್ಯಾಪಕ ಡಾ.ಡಿ.ಎಸ್. ಪಾಟೀಲ ಮಾತನಾಡಿ, ಜಾಗತೀಕರಣ, ತಾಂತ್ರೀಕರಣ, ಆಧುನೀಕರ ಹಾಗೂ ಪಾಶ್ಚಾತ್ಯೀಕರಣದತಂತ್ರಕಾರಣದಿಂದಾಗಿ ಇಂದು ಅಂತಃಕರಣ ಮಾಯವಾಗುತ್ತಿದೆ ಎಂದು ವಿಷಾದಿಸಿದರು.
ಜಗತ್ತಿಗೆ ಗುರುವಿನ ಅನುಗ್ರಹ ಅತ್ಯಂತ ಅವಶ್ಯ, ಚಕ್ರವರ್ತಿಯಾಗಿದ್ದರೂ ಸಹ ಅಲೆಕ್ಸಾಂಡರ್ ತನ್ನ ಗುರು ಅರಿಸ್ಟಾಟಲ್ ಶಿರಬಾಗಿ ನಮಸ್ಕರಿಸಿದಾಗ ಆತನ ಮಂತ್ರಿ ನಿಮಗೆ ನಿಮ್ಮ ತಂದೆ ಸ್ವರ್ಗವನ್ನೇ ಧರೆಗೆ ತಂದಿದ್ದಾರೆ, ನೀವು ಈ ವ್ಯಕ್ತಿಗೆ ತಲೆಬಾಗುತ್ತಿರಲ್ಲ ಎಂದು ಆಕ್ಷೇಪಿಸಿದ, ಆಗ ಅಲೆಕ್ಸಾಂಡರ್ ನನ್ನ ತಂದೆ ಸ್ವರ್ಗ ಧರೆಗಿಳಿಸಿರಬಹುದು, ಆದರೆ ಈ ಗುರು ನನ್ನನ್ನೇ ಸ್ವರ್ಗದೆತ್ತರಕ್ಕೆ ಏರಿಸಿದ್ದಾರೆ, ತಂದೆ ಈ ನಶ್ವರ ಶರೀರ ನೀಡಿರಬಹುದು, ಆದರೆ ಜ್ಞಾನ ಎಂಬ ಅಮರ ಸಿರಿ ನೀಡಿದ್ದು ಗುರು ಎಂದು ಅಲೆಕ್ಸಾಂಡರ್ ಹೇಳುತ್ತಾನೆ, ಗುರು ಗೋವಿಂದನಿಗಿಂತ ಶ್ರೇಷ್ಠ ಎಂಬುದು ನಮ್ಮ ಭಾರತೀಯ ಸಂಸ್ಕೃತಿ ಎಂದರು.
ಶಿಷ್ಯಂದಿರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡುವುದು ಗುರುವಿನ ಆದ್ಯ ಕರ್ತವ್ಯ ಎಂದರು.
ಅನ್ನವಿಲ್ಲದೇ ಅನೇಕ ಪ್ರತಿಭೆಗಳು ಅಕ್ಷರ ಲೋಕದಿಂದ ವಿಮುಖರಾಗಿ ಕೂಲಿ ಅರಸಿ ಹೋಗುವಂತಾಗಿದೆ, ಇಂತಹ ಮಕ್ಕಳನ್ನು ಗುರುತಿಸಿ ಅವರಿಗೆ ದಾಸೋಹದ ಜೊತೆಗೆ ಜ್ಞಾನ ಉಣಬಡಿಸುವ ಕಾರ್ಯ ನಡೆಯಬೇಕಿದೆ ಎಂದರು.
ಶ್ರೇಷ್ಠ ತತ್ವಜ್ಞಾನಿ, ಶಿಕ್ಷಣ ರಂಗಕ್ಕೆ ಮಹೋನ್ನತ ಕೊಡುಗೆ ನೀಡಿದ ಡಾ.ಸರ್ವೇಪಲ್ಲಿ ರಾಧಾಕೃಷ್ಣ ಅವರನ್ನು ನಿತ್ಯ ನೆನೆಯಬೇಕು ಎಂದರು.
ನಿಡುಮಾಮಿಡಿ ಮಠದ ದಿವ್ಯ ಇತಿಹಾಸದ ಕುರಿತು ಸುದೀರ್ಘವಾಗಿ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ.ಎಸ್. ಪಾಟೀಲ ಮಾತನಾಡಿ, ರಾಷ್ಟ್ರಭಕ್ತಿ ಹಾಗೂ ರಾಷ್ಟ್ರನೀತಿ ಶಿಕ್ಷಣ ಭಾಗವಾಗಿರಬೇಕು, ಈ ಮೌಲ್ಯಗಳ ವಿಮುಖತೆಯಿಂದಾಗಿಯೇ ಶಿಕ್ಷಣ ವ್ಯವಸ್ಥೆ ಹಳ್ಳ ಹಿಡಿದುಹೋಗುತ್ತಿದೆ, ಶಿಕ್ಷಣ ಎಂದೂ ವ್ಯಾಪಾರೀಕರಣವಾಗಬಾರದು, ಶಿಕ್ಷಣ ಒಂದು ಉದ್ಯಮ ಅಲ್ಲ ಅದೊಂದು ಆದರ್ಶ, ಆದರೆ ಇಂದಿಗೂ ಸಮರ್ಪಣಾ ಮನೋಭಾವ ಅನೇಕ ಶಿಕ್ಷಕರಿಂದ ಜ್ಞಾನ ಪಸರಿಸುತ್ತಿದೆ ಎಂದರು.
ಸಮಾಜದಲ್ಲಿರುವ ಬಡತನ, ದಾರಿದ್ರ್ಯ, ಕೀಳರಿಮೆ, ಗೊಡ್ಡು ಆಚರಣೆಗಳಿಗೆ ತಿಲಾಂಜಲಿ ಹಾಕಿ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಶಿಕ್ಷಣ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ ಎಂದರು.
ಜಗತ್ತಿಗೆ ಶ್ರೇಷ್ಠ ತತ್ವಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರಿಗೆ ಈ ಯಾವ ಹುದ್ದೆಗಳು ತೃಪ್ತಿ ತರಲಿಲ್ಲ, ಶಿಕ್ಷಕರಾಗಿದ್ದೇ ಅವರಿಗೆ ತೃಪ್ತಿ ತರುವ ವಿಷಯವಾಗಿತ್ತು, ಕೆಂಬ್ರಿಡ್ಜ್, ಚಿಕಾಗ್ಯೋ ಮೊದಲಾದ ವಿವಿಗಳಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ದೇಶ ಕಂಡ ಮಹಾನ್ ಜ್ಞಾನಿ ಎಂದರು.
ಡಾ.ರಾಧಾಕೃಷ್ಣನ್ ಅವರು ರಷ್ಯಾ ರಾಯಭಾರಿಯಾಗಿದ್ದ ಸಂದರ್ಭದಲ್ಲಿ ರಷ್ಯಾ ಸರ್ವಾಧಿಕಾರಿ ಸ್ಟಾಲಿನ್
ಅಧಿಕಾರದಲ್ಲಿದ್ದರು, ಆಗ ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರನ್ನು ಸದಾ ಪ್ರೊಫೆಸರ್ ಎಂದೇ ಕರೆದರು ಎಂದರು.
ಸಂಸ್ಥೆಯ ಕಾರ್ಯಾಧ್ಯಕ್ಷ ಎಸ್.ಜಿ. ಪಾಟೀಲ, ಪದಾಧಿಕಾರಿ ಎಂ.ಜೆ. ಪಾಟೀಲ, ಡಾ.ಸುರೇಶ ಪಾಟೀಲ, ಶಿವಕುಮಾರ ಬಿರಾದಾರ, ಎಂ.ಎಸ್. ಚೌಧರಿ, ಎಸ್.ಎಸ್. ಪಾಟೀಲ, ಎಸ್.ಜಿ. ಪಾಟೀಲ, ಎಂ.ಎಚ್. ಪಲದಿನ್ನಿ, ಶಕುಂತಲಾ ಕಡಕಲ್, ಆರ್.ಎ. ಪಾಟೀಲ, ಬಸನಗೌಡ ನಾಗನಗೌಡರ, ಆರ್.ಎಸ್. ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ರುದ್ರಗೌಡ ಪಾಟೀಲ, ಡಾ.ಎಸ್.ಸಿ. ಪಾಟೀಲ, ಮಲ್ಲಿಕಾರ್ಜುನ ಬೆಳಗಲ್, ಪ್ರಭು ಬೆಳ್ಳಿ, ಶ್ರೀಶೈಲ ಬಾದರಬಂಡಿ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.