ವರದಿ :ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಕಳೆದ ಆಗಸ್ಟ್ ತಿಂಗಳಿಂದ ಸೇವೆಯಿಂದ ಹೊರಗೆ ಉಳಿದ ಅತಿಥಿ ಉಪನ್ಯಾಸಕರಿಗೆ ನ್ಯಾಯಾಲಯ ತೀರ್ಪು ವಿಳಂಬ ಆಗಿರುವುದರಿಂದ ಕಾನೂನು ತಿದ್ದುಪಡಿ ಮೂಲಕ ಸರಕಾರ ಉದ್ಯೋಗ ಭದ್ರತೆ ಕೊಡುವ ತೀರ್ಮಾನ ಮಾಡಬೇಕು ಎಂದು ಅಗ್ರಹಿಸಿ ಸ್ಥಳೀಯ ಸರಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ತಹಸಿಲ್ದಾರ್ ಮೂಲಕ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಅತಿಥಿ ಉಪನ್ಯಾಸಕರ ಸಂಘದ ಸದಸ್ಯರು ಸಲ್ಲಿಸಿದ ಮನವಿಯಲ್ಲಿ, ಹತ್ತಾರು ವರ್ಷಗಳಿಂದ ಸೇವೆಯಲ್ಲಿ ಇರುವವರು ಇದೇ ಉದ್ಯೋಗವನ್ನು ಅವಲಂಬಿಸಿದ್ದು ಒಂದು ತಿಂಗಳಿನಿಂದ ನೇಮಕಾತಿ ಕೌನ್ಸಿಲಿಂಗ್ ಮಾಡದೆ ಇರುವುದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಹೀಗಾಗಿ ಪ್ರತಿ ವರ್ಷ ಕೌನ್ಸಿಲಿಂಗ್ ಮಾಡುವುದನ್ನು ಕೈ ಬಿಟ್ಟು ಇತರ ಇಲಾಖೆಗಳಲ್ಲಿ ತಾತ್ಕಾಲಿಕ ನೌಕರರನ್ನು ಸೇವಾ ಭದ್ರತೆ ನೀಡಿದಂತೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕೊಡಬೇಕು. ಇದಕ್ಕಾಗಿ ಕಾನೂನು ತಿದ್ದುಪಡಿ ಮಾಡಿ ಅನುಭವಿ, ಅರ್ಹ ಮತ್ತು ವಯೋಮಿತಿಗೆ ತಕ್ಕಂತೆ ನೇಮಕಾತಿ ಮಾಡುವ ನೇಮಕಾತಿ ಯೋಜನೆ (ಸ್ಕೀಮ್ ಆಫ್ ಅಪಾಯಿಂಟ್ಮೆಂಟ್) ಕಾಯ್ದೆ ತರಬೇಕು. ಜೊತೆಗೆ ಹತ್ತಾರು ವರ್ಷ ದುಡಿಯುತ್ತಿರುವ ಅವರಿಗೆ ಕೇಂದ್ರ ಸರ್ಕಾರದ ಸಮ್ಮತಿಯೊಂದಿಗೆ ಯುಜಿಸಿ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಿ, ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕು. ಹೊಸದಾಗಿ ಹುದ್ದೆ ಕರೆ ಮಾಡಬಾರದು ಎಂದು ತಿಳಿಸಿದ್ದಾರೆ.
ತಹಸಿಲ್ದಾರ್ ಕಚೇರಿಯ ಸಿರಸ್ತೆದಾರ ಬಾಗೇವಾಡಿ ಅವರು ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಗಿರೀಶ್ ವಾಗಣಗೇರಿ ಮುಸ್ತಾಕ್ ಭಾಗವಾನ್. ಡಾ ಸಂತೋಷ ಹೊಸಮನಿ. ಪ್ರದೀಪ ಕುಮಾರ ಜಗ್ಗಲ್. ವಿನಯ್ ಗಡೆದ ಡಾ ಹಳ್ಳೆಪ್ಪ ದಾಸರ. ಶ್ರೀಶೈಲ ಉಪ್ಪಾರ. ಡಾ ಯಲ್ಲಪ್ಪ ಗುಂಡಕರ್ಜಗಿ. ಅಜಯಕುಮಾರ ನಿಗಶೆಟ್ಟಿ. ರವೀಂದ್ರ ನಂದಪ್ಪನವರ,ಸೇರಿದಂತೆ ಉಪಸ್ಥಿತರಿದ್ದರು.