ಗೃಹಲಕ್ಷ್ಮೀ ತಾಂತ್ರಿಕ ಸಮಸ್ಯೆ ಸ್ಥಳದಲ್ಲಿಯೇ ಇತಿಶ್ರೀ : ಸಚಿವ ಪ್ರೀಯಂಕ್ ಖರ್ಗೆ
Voice Of Janata : ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುವಲ್ಲಿ ತೊಂದರೆ ಎದುರಿಸುತ್ತಿರುವ ಫಲಾನುಭವಿಗಳು ತಮ್ಮ ಹಾಗೂ ಪತಿಯ ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಪಾಸ್ಬುಕ್ ದಾಖಲೆಗಳೊಂದಿಗೆ ಶಿಬಿರಕ್ಕೆ ಬರಬೇಕು ಎಂದಿರುವ ಸಚಿವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕ್ಷೇತ್ರಮಟ್ಟದ ಸಿಬ್ಬಂದಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮಾಹಿತಿ ನೀಡಿ ಅವರನ್ನು ಶಿಬಿರಗಳಿಗೆ ಕರೆ ತರುವ ವ್ಯವಸ್ಥೆ ಮಾಡಲಾಗಿದೆ ಹಾಗೂ ಎಸ್.ಎಂ.ಎಸ್ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ, ಸ್ಥಳದಲ್ಲಿಯೇ ಪರಿಹಾರ ಒದಗಿಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಡಿ.27 (ಬುಧವಾರ) ರಿಂದ 29 (ಶುಕ್ರವಾರ) ರವರೆಗೆ ಮೂರು ದಿನಗಳ ಕಾಲ ವಿಶೇಷ ಶಿಬಿರ ಆಯೋಜಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಆಧಾರ್ ಜೋಡಣೆ, ಬ್ಯಾಂಕಿಗೆ ಸಂಬಂಧಿಸಿದ ತೊಂದರೆ, ಇ-ಕೆವೈಸಿ ಅಪ್ಡೆಟ್, ಹೊಸ ಬ್ಯಾಂಕ್ ಖಾತೆ ಆರಂಭ ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಹಲವು ಮಹಿಳೆಯರು ತೊಂದರೆ ಎದುರಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಈ ತೊಂದರೆಗಳನ್ನು ಪರಿಹರಿಸಿ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಜಮಾವಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಈ ಶಿಬಿರ ಸಜ್ಜುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಮೂರು ದಿನಗಳ ಕಾಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಈ ಶಿಬಿರಗಳನ್ನು ಆಯೋಜಿಸಲಾಗುವುದು, ಬಾಪೂಜಿ ಸೇವಾ ಕೇಂದ್ರದ ಗಣಕಯಂತ್ರ ನಿರ್ವಾಹಕರು, ಅಂಗನವಾಡಿ ಕಾರ್ಯಕರ್ತರು ಮತ್ತು ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸಸ್ (ಇ.ಡಿ.ಸಿ) ತಂಡಗಳು ಈ ಶಿಬಿರಗಳಲ್ಲಿ ಭಾಗವಹಿಸಲಿದ್ದಾರೆ.
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಹಾಗೂ ಇತರೆ ಬ್ಯಾಂಕ್ಗಳ ಪ್ರತಿನಿಧಿಗಳು ಈ ಶಿಬಿರದಲ್ಲಿ ಭಾಗವಹಿಸಿ ನೆರವಾಗಲಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ಮತ್ತು ಬ್ಯಾಂಕ್ ಸಂಬಂಧಿಸಿದ ಸಮಸ್ಯೆಗಳನ್ನು ಶಿಬಿರದಲ್ಲಿಯೇ ಪರಿಹರಿಸಲಾಗುವುದು, ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಗೃಹಲಕ್ಷ್ಮಿ ಫಲಾನುಭವಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಿದ್ದಾರೆ.
ಗೃಹಲಕ್ಷ್ಮಿ ಫಲಾನುಭವಿಗಳ ಸಮಸ್ಯೆ ನಿವಾರಣೆಗಾಗಿ ಶಿಬಿರದಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ಆಧಾರ್ ಜೋಡಣೆ ಮಾಡುವುದು, ಇ-ಕೆವೈಸಿ ಅಪ್ಡೆಟ್, ಗೃಹಲಕ್ಷ್ಮಿಅರ್ಜಿಯ ಸ್ಥಿತಿ ಪರಿಶೀಲನೆ ಮತ್ತು ಇನ್ನಿತರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಲಾಗುವುದು, ಶಿಬಿರ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಡಿ.27ರಿಂದ ಡಿ.29ರ ವರೆಗೆ ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಜರುಗಲಿದೆ ಎಂದು ಸಚಿವ ಖರ್ಗೆ ಮಾಹಿತಿ ನೀಡಿದ್ದಾರೆ.