ಸರಕಾರಿ ಎಚ್.ಪಿ.ಎಸ್ ಶಾಲೆಯನ್ನು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಉನ್ನತಿಕರಿಸಲು ಸರಕಾರ ಆದೇಶ
ವಿಜಯಪುರ : ಸರಕಾರ ಸಿ.ಎಸ್.ಆರ್ ಮತ್ತು ದಾನಿಗಳ ಅನುದಾನ, ಸರಕಾರಿ ಅನುದಾನದಡಿ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 18 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಪ್ರಸಕ್ತ 2025-26 ಶೈಕ್ಷಣಿಕ ವರ್ಷದಿಂದ ಉನ್ನತಿಕರಿಸಿ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಸ್ಥಳೀಯ ಶಾಸಕರು ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಕ್ಕೆ ಸ್ಪಂದಿಸಿ ಸರಕಾರ ಈ ಶಾಲೆಗಳ ಉನ್ನತಿಕರಣಕ್ಕೆ ಕ್ರಮ ಕೈಗೊಂಡಿದೆ. ಇದರಲ್ಲಿ ಬಬಲೇಶ್ವರ ಮತಕ್ಷೇತ್ರದ ಆರು, ಸಿಂದಗಿ ತಾಲೂಕಿನ ಎಂಟು, ಮುದ್ದೇಬಿಹಾಳ ತಾಲೂಕಿನ ಎರಡು, ಬಸವನ ಬಾಗೇವಾಡಿ ಮತ್ತು ಇಂಡಿ ತಾಲೂಕಿನ ತಲಾ ಒಂದು ಶಾಲೆಗಳನ್ನು ಪ್ರೌಢಶಾಲೆಗೆ ಉನ್ನತಿಕರಿಸಿ ಆದೇಶ ಹೊರಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ಕೈಗಾರಿಕೆ ಇಲಾಖೆಯ ಸಿ.ಎಸ್.ಆರ್ ಅನುದಾನದಡಿ ಬಬಲೇಶ್ವರ ಮತ್ತು ತಿಕೋಟಾ ತಾಲೂಕಿನ ಹೊನವಾಡದಲ್ಲಿರುವ ಸರಕಾರಿ ಎಂ.ಪಿ.ಎಸ್, ಕಾತ್ರಾಳದ ಹಿರಿಯ ಪ್ರಾಥಮಿಕ ಶಾಲೆ, ರಾಜ್ಯ ಸರಕಾರಿ ಅನುದಾನದಡಿ ಸಿದ್ದಾಪೂರ(ಅ) ಸರಕಾರಿ ಜಿ.ಎಚ್.ಪಿ.ಎಸ್ ಶಾಲೆ, ನಿಡೋಣಿಯ ಸರಕಾರಿ ಎಚ್.ಪಿ.ಎಸ್, ತಿಗಣಿಬಿದರಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಕೋಟ್ಯಾಳದ ಎಚ್.ಪಿ.ಎಸ್ ಶಾಲೆ ಪ್ರೌಢಶಾಲೆಗಳಾಗಿ ಉನ್ನತಿಕರಣವಾಗಲಿವೆ.
ಅದೇ ರೀತಿ ರಾಜ್ಯ ಸರಕಾರದ ಅನುದಾನದಡಿ ಸಿಂದಗಿ ತಾಲೂಕಿನ ಸಿಂದಗಿ ಪಟ್ಟಣದ ಸರಕಾರಿ ಕೆ.ಜಿ.ಎಚ್.ಪಿ.ಎಸ್ ಶಾಲೆ, ಬೊಮ್ಮನಜೋಗಿ ಎಲ್.ಟಿ-1 ಸರಕಾರಿ ಜಿ.ಎಚ್.ಪಿ.ಎಸ್ ಶಾಲೆ, ಕೋರವಾರದ ಕೆ.ಬಿ.ಎಚ್.ಪಿ.ಎಸ್ ಶಾಲೆ, ನಾಗರಹಳ್ಳಿಯ ಸರಕಾರಿ ಕೆ.ಬಿ.ಎಚ್.ಪಿ.ಎಸ್ ಶಾಲೆ, ಚಿಕ್ಕಸಿಂದಗಿಯ ಸರಕಾರಿ ಕೆ.ಬಿ.ಎಚ್.ಪಿ.ಎಸ್ ಶಾಲೆ, ಆಹೇರಿಯ ಸರಕಾರಿ ಎಂ.ಪಿ.ಎಸ್ ಶಾಲೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಗುಂದಗಿಯ ಸರಕಾರಿ ಕೆ.ಬಿ.ಎಚ್.ಪಿ.ಎಸ್ ಶಾಲೆ ಮತ್ತು ಮಾದನಹಳ್ಳಿಯ ಸರಕಾರಿ ಕೆ.ಬಿ.ಎಚ್.ಪಿ.ಎಸ್ ಶಾಲೆಗಳು ಪ್ರೌಢಶಾಲೆಗಳಾಗಿ ಉನ್ನತಿಕರಣವಾಗಲಿವೆ.
ರಾಜ್ಯ ಸರಕಾರದ ಅನುದಾನದಡಿ ಮುದ್ದೇಬಿಹಾಳ ತಾಲೂಕಿನ ಶಿವಪೂರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಗಡಿಸೋಮನಾಳ ಗ್ರಾಮದ ಸರಕಾರಿ ಎಚ್.ಪಿ.ಎಸ್ ಶಾಲೆಗಳು ಪ್ರೌಢಶಾಲೆಗಳಾಗಿ ಉನ್ನತಿಕರಣವಾಗಲಿವೆ.
ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯ ಸರಕಾರಿ ಯು.ಬಿ.ಎಚ್.ಪಿ.ಎಸ್ ಶಾಲೆಯನ್ನು ರಾಜ್ಯ ಸರಕಾರದ ಅನುದಾನದಡಿ ಮತ್ತು ಇಂಡಿ ತಾಲೂಕಿನ ತೆಗ್ಗಿಹಳ್ಳಿಯ ಸರಕಾರಿ ಎಚ್.ಪಿ.ಎಸ್ ಶಾಲೆಯನ್ನು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಉನ್ನತಿಕರಿಸಲು ಸರಕಾರ ಆದೇಶ ಹೊರಡಿಸಿದೆ ಎಂದು ಸಚಿವ ಎಂ. ಬಿ. ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.