ಸರಕಾರಿ ನೌಕರರು ಪದೇ-ಪದೇ ಪ್ರತಿಭಟನೆ..! ಇದಕ್ಕೆ ಯಾರು ಹೊಣೆ : ಜಿಲ್ಲಾಧ್ಯಕ್ಷ ಎಸ್.ಬಿ. ಕೆಂಬೋಗಿ
ಇಂಡಿ: ಸರಕಾರಿ ನೌಕರರು ಪದೇ-ಪದೇ ಪ್ರತಿಭಟನೆ ಮಾಡುತ್ತಿರುವುದರಿಂದ ಜನ ಸಾಮಾನ್ಯರಿಗೆ, ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಸರಕಾರ ಅವರನ್ನು ಒಮ್ಮೆ ಕರೆಯಿಸಿ ಅವರ ಸಮಸ್ಯೆ ಈಡೇರಿಸಿ ಜನ ಸಾಮಾನ್ಯರ ಕೆಲಸ ಮಾಡಲು ಅನುವು ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ಜಿಲ್ಲಾಧ್ಯಕ್ಷ ಎಸ್.ಬಿ. ಕೆಂಬೋಗಿ ಹೇಳಿದರು.
ಅವರು ಗುರುವಾರ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯ ಸರಕಾರಿ ನೌಕರಸ್ಥರು ಬೀದಿಗಿಳಿದು ಪದೇ ಪದೇ ಪ್ರತಿಭಟನೆ, ಹೋರಾಟ ಮಾಡುತ್ತಿರುವುದು ಕಂಡರೆ ಪ್ರಜ್ಞಾವಂತ ನಾಗರಿಕ ಸಮಾಜಕ್ಕೆ ಮುಜಗರ ಪಡುವಂತಾಗುತ್ತಿದೆ. ಈ ಹೋರಾಟ ಪ್ರತಿಭಟನೆಗೆ ಸರಕಾರವೇ ಜವಾಬ್ದಾರಿ ಮತ್ತು ಕಾರಣ ಹೊರಬೇಕಾಗುತ್ತದೆ. ಈ ನಡೆ ಸರಕಾರದ ಸಂಪೂರ್ಣ ಆಡಳಿತ ವೈಫಲ್ಯ ತೋರುತ್ತಿದೆ. ಈಗಾಗಲೇ ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಹಾಗೂ ಎಲ್ಲಾ ಇಲಾಖೆ ಮಾತೃ ಇಲಾಖೆ ಎನಿಸಿಕೊಳ್ಳುವ ಕಂದಾಯ ಇಲಾಖೆ ನೌಕರಸ್ಥರು ಪ್ರತಿಭಟನೆಗೆ ಇಳಿದಿದ್ದು, ಕಾರ್ಯಾಂಗ ವ್ಯವಸ್ಥೆಯ ಕಾರ್ಯಚಟುವಟಿಕೆಗಳು ಸಂಪೂರ್ಣ ನಿಂತು ಹೋಗಿವೆ. ಸದ್ಯ ಮತ್ತೆ ಎರಡನೇ ಹಂತದ ಪ್ರತಿಭಟನೆಗೆ ಸರಕಾರಿ ನೌಕರಸ್ಥರು ಇಳಿದಿದ್ದು ಕಂಡರೆ, ಶಾಲಾ ವಿಧ್ಯಾರ್ಥಿಗಳು, ರೈತಾಪಿ ವರ್ಗ ಹಾಗೂ ಜನಸಾಮನ್ಯರ ಗತಿಯೇನು? ಈಗಾಗಲೇ ಗ್ರಾಮ ಆಡಳಿತ ಅಧಿಕಾರಿಗಳು ಮೊದಲನೆ ಹಂತದ ಪ್ರತಿಭಟನೆ ನಡೆಸಿ ಈಗ ಮತ್ತೆ ಎರಡನೇ ಹಂತದ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದ ಜನಸಾಮಾನ್ಯರು ದೊಡ್ಡ ಪ್ರಮಾಣದ ಸಮಸ್ಯೆ ಅನುಭವಿಸುತ್ತಿದ್ದಾರೆ.
ಝಳಕಿ ಭಾಗದ ರೈತ ಮುಖಂಡ ರಾಘವೇಂದ್ರ ಕಾಪಸೆ ಮಾತನಾಡಿ, ಇಂಡಿ ತಾಲೂಕಿನಲ್ಲಿ ಕಂದಾಯ ಇಲಾಖೆಯ ಗ್ರಾಮಾಡಳಿತ ಅಧಿಕಾರಿಗಳು ಮುಷ್ಕರ ಮಾಡುತ್ತಿದ್ದು, ಇದರಿಂದ ಜನರಿಗೆ ಸರ್ಕಾರ ಸೌಲಭ್ಯದಿಂದ ವಂಚತರಾಗುತ್ತಿದ್ದಾರೆ. ಈ ಕೂಡಲೆ ಸರಕಾರಿ ನೌಕರಸ್ಥರ ಬೇಡಿಕೆಗೆ ಸ್ಪಂದಿಸಿ, ಪ್ರತಿಭಟನೆಯ ಹಿಂಪಡೆಯಲು ತಿಳಿಸಬೇಕು. ಬೇಗನೆ ಸೂಕ್ತ ಕ್ರಮಕೈಗೊಂಡು ಮುಷ್ಕರಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಹಸಿರುಸೇನೆ ತಾಲೂಕಾ ಅಧ್ಯಕ್ಷ ತಮ್ಮಾರಾಯ ಆಸಂಗಿ ಮಾತನಾಡಿ, ಹೆಸ್ಕಾಂ ಇಲಾಖೆಯವರು ತಾರತಮ್ಯ ಮಾಡುತ್ತಿದ್ದಾರೆ. ಪಟ್ಟಣಕ್ಕೆ ಒಂದು ಕರೆಂಟ್ ಹಳ್ಳಿಗೆ ಒಂದು ಕರೆಂಟ್ ಮಾಡುವದರಿಂದ ರೈತಾಪಿ ವರ್ಗದ ಮಕ್ಕಳು ವಿದ್ಯಾಭ್ಯಾಸ ಮಾಡಬಾರದೇ? ಗ್ರಾಮೀಣ ಭಾಗದ ಮಕ್ಕಳಿಗೆ ಸರಿಯಾಗಿ ವಿದ್ಯುತ್ ಹಾಗೂ ಸಮಯಕ್ಕೆ ಬಸ್ ವ್ಯವಸ್ಥೆ ಇಲ್ಲದೆ ಅತ್ಯಂತ ನೋವು ಅನುಭವಿಸುತ್ತಿದ್ದಾರೆ. ಕೇವಲ ಸ್ವಲ್ಪ ದಿನಗಳಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಹತ್ತಿರ ಬರುತ್ತಿದ್ದು, ಇಂತಹ ಸಂದರ್ಭದಲ್ಲಿ ವಿದ್ಯುತ್ ಇರದೆ ಇರುವುದರಿಂದ ಮೇಣದ ಬತ್ತಿಯ ದೀಪದ ಕೆಳಗೆ ಓದುತ್ತಿದ್ದಾರೆ. ಗ್ರಾಮೀಣ ಭಾಗಕ್ಕೆ ಸರಿಯಾದ ಸಮಯಕ್ಕೆ ಬಸ್ ಬಾರದೆ ಇರುವ ಕಾರಣಕ್ಕೆ ವಿಧ್ಯಾರ್ಥಿಗಳು ಶಿಕ್ಷಣದಿಂದ ವಂಚಿತವಾಗುವAತಾಗಿದೆ ಎಂದು ಆರೋಪಿಸಿದರು.
ಕೊನೆಯಲ್ಲಿ ತಹಸೀಲ್ದಾರ ಬಿ.ಎಸ್. ಕಡಕಭಾವಿ ಅವರಿಗೆ ಮನವಿ ಸಲ್ಲಿಸಿ, ಸಮಸ್ಯೆ ಪರಿಹರಿಸಲು ವಿನಂತಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಬಸವರಾಜ ಆಸಂಗಿ, ಲಾಯಪ್ಪ ಆಸಂಗಿ, ರಫೀಕ ಚೌದರಿ, ನಾಗಪ್ಪ ನಿಡಗುಂದಿ, ರವಿ ಪರೀಟ, ರಾಮಚಂದ್ರ ಮೆಂಡೆಗಾರ, ಬಸವರಾಜ ಬೇನೂರ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ತಹಸೀಲ್ದಾರ ಬಿ.ಎಸ್. ಕಡಕಭಾವಿ ಅವರಿಗೆ ಮನವಿ ಸಲ್ಲಿಸಿದರು.



















