ರೈತರಿಗೆ ನೀರು ಕೊಟ್ಟು ಪುಣ್ಯ ಕಟ್ಕೋಳ್ಳಿ..!
ವಿಜಯಪುರ : ತಾಲೂಕಿನ ವ್ಯಾಪ್ತಿಯಲ್ಲಿರುವ ಕನ್ನೂರ ಹಾಗೂ ಮಡಸನಾಳ, ಕನ್ನೂರ ದರ್ಗಾ, ಕನ್ನೂರ ತಾಂಡಾ, ಕನ್ನಾಳ, ಗುಣಕಿ ಬೊಮ್ಮನಹಳ್ಳಿ, ಮಿಂಚನಾಳ ಮತ್ತು ಮಿಂಚನಾಳ ತಾಂಡಾ, ಶಿರನಾಳ, ಮಖಣಾಪೂರ ಮತ್ತು ಮಖಣಾಪೂರ ತಾಂಡಾ, ತಿಡಗುಂದಿ, ಹಾಗೂ ಡೊಮನಾಳ ಈ ಎಲ್ಲ ಗ್ರಾಮಗಳಿಗೂ ಕುಡಿಯುವ ನೀರಿನ ಸಲುವಾಗಿ ಕೆರೆಗಳನ್ನು ನೀರು ತುಂಬಿಸುವದು ಹಾಗೂ ರೇವಣಸಿದ್ದೇಶ್ವರ ಏತ ನೀರಾವರಿಯ, ಪೈಪಲೈನಿಗೆ ಜಾಕವೆಲ್ ಬಿಡುವ ಸಲುವಾಗಿ ಸಾಕಷ್ಟು ಬಾರಿ ಸಂಬAಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಮಸ್ಯೆ ಹೇಳಿಕೊಂಡರೂ ಇಲ್ಲಿಯವರೆಗೆ ಯಾವುದೇ ಸ್ಪಂದನೆ ಸಿಕ್ಕಿರುವದಿಲ್ಲ ಆದ್ದರಿಂದ ಎಲ್ಲ ಗ್ರಾಮಗಳಿಗೂ ಸಮಗ್ರ ನೀರಾವರಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲಾಧಿಕಾರಿಗಳಾದ ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮುನ್ನ ಆಮರಣಾ ಉಪವಾಸ ಬೃಹತ್ ಪ್ರತಿಭಟನಾ ಮೆರವಣಿಗೆಯು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಆರಂಬಗೊAಡು ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಸಭೆಯಾಗಿ ಮಾರ್ಪಟ್ಟಿತು.
ಬೃಹತ್ ಪ್ರತಿಭಟನಾ ಮೆರವಣಿಗೆ ದಾರಿಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು
ಈ ಸಂದರ್ಭದಲ್ಲಿ ಕನ್ನೂರ ಗುರು ಮಠದ ಶ್ರೀ ಸೋಮನಾಥ ಶಿವಾಚಾರ್ಯರಾದ ಮಾತನಾಡಿ, ನಮ್ಮೆಲ್ಲ ರೈತರು ನೀರಿಗಾಗಿ ಸಾಕಷ್ಟು ಮನವಿಯನ್ನು ಸಲ್ಲಿಸಿದರೂ, ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಸರಿಯಾಗಿ ಸ್ಪಂದಿಸಿಲ್ಲ. ರೇವಣಸಿದ್ಧೇಶ್ವರ ಏತ ನೀರಾವರಿ ಆಗಬೇಕು ಎನ್ನುವ ಸಂದರ್ಭದಲ್ಲಿ ಕನ್ನೂರು, ಮಡಸನಾಳ ಸೇರಿದಂತೆ 14 ಗ್ರಾಮಗಳಿಗೆ ನೀರಿನ ಸೌಲಭ್ಯ ಒದಗಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿತ್ತು. ಕೆಲವರು ಶಾಸಕರು ತಮ್ಮ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸಿದ್ದಾರೆ. ನಮ್ಮ ಭಾಗಕ್ಕೂ ಮಾಡಬೇಕು. ಸಾಕಷ್ಟು ರೈತರು ನೀರಾವರಿ ವ್ಯವಸ್ಥೆ ಇಲ್ಲದೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೇವಣಸಿದ್ದೇಶ್ವ ಏತ ನೀರಾವರಿ ಕಾಮಗಾರಿಯಲ್ಲಿ ನಮಗೆ ಜಾಕವಾಲ್ ಕೊಡುವ ಮೂಲಕ ಪರಿಪೂರ್ಣ ನೀರಾವರಿ ಕಲ್ಪಿಸಬೇಕು ಎಂದರು. ನಮ್ಮ ಭಾಗದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿಕೊಟ್ಟರೆ ಮಾತ್ರ ನಾವು ರೇವಣಸಿದ್ಧೇಶ್ವ ಏತ ನೀರಾವರಿ ಯೋಜನೆ ಸಹಕಾರ ನೀಡುತ್ತೇವೆ ಇಲ್ಲವಾದರೆ ಅದನ್ನು ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸತೀಶ ಪಾಟೀಲ ಮಾತನಾಡಿ, ಕನ್ನೂರ, ಮಡಸನಾಳ ಸೇರಿದಂತೆ 14 ಗ್ರಾಮಗಳಲ್ಲಿ ರೇವಣಸಿದ್ಧೇಶ್ವರ ಏತ ನೀರಾವರಿಯ ಮೂರು ಜಾಕ್ವೇಲಗಳನ್ನು ಅವಶ್ಯಕತೆ ಇದ್ದಲ್ಲಿ ಅಳವಡಿಸಿ ಸಮಗ್ರ ನೀರಾವರಿ ಮಾಡಬೇಕು. ಈ ಯೋಜನೆಯು 2638 ಕೋಟಿ ರೂ. ಮೂರು ಹಂತದಲ್ಲಿ ಅಂದರೆ 760 ಕೋಟಿ ಮೊದಲನೇ ಹಂತ, 939 ಕೋಟಿ ಮೂರನೆ ಹಂತ ಕಾಮಗಾರಿ ನಡೆಸುವ ಯೋಜನೆ ರೂಪಿಸಲಾಗಿದೆ. ಮೊದಲನೇ ಹಂತದಲ್ಲಿ ಜಾಕ್ವೆಲ ಬಿಡುವುದು, ತಾಂತ್ರಿಕ ವ್ಯವಸ್ಥೆ ಹಾಗೂ ಸರ್ವೆ ಮಾಡುವುದಾಗಿದೆ. ಈ ನಕ್ಷೆಯಲ್ಲಿ ಕನ್ನೂರಿನ ಯಾವುದೇ ಭಾಗದಲ್ಲಿ ಜಾಕ್ವೆಲ ಬಿಡದಿದ್ದಕ್ಕಾಗಿ ಶಾಶ್ವತ ನೀರಾವರಿ ವಂಚಿತ ಪ್ರದೇಶವಾಗಿ ಉಳಿದು ಬಿಡುವುದೋ ಏನೋ ಎಂಬ ಭಯದಿಂದ ಈ ಆಮರಣ ಉಪವಾಸ ಸತ್ಯಾಗ್ರಹಕವನ್ನು ಹಮ್ಮಿಕೊಂಡಿದ್ದೇವು. ಆದರೆ ಆಮರಣ ಉಪವಾಸ ಸತ್ಯಾಗ್ರಹಕ್ಕೆ ಕೊನೆ ಕ್ಷಣದಲ್ಲಿ ಏಕಾ ಏಕಿ ವಿಜಯಪುರ ಜಿಲ್ಲಾಡಳಿತ ಅನುಮತಿ ನೀಡದೆ ಬ್ರಿಟಿಷ್ ಆಡಳಿತವನ್ನು ರೈತರ ಮೇಲೆ ಹೇರಿ ರೈತರಿಗೆ ಅನ್ಯಾಯಮಾಡಿದೆ ಎಂದರು. ಮೊದಲೇ ತಿಡಗುಂದಿ ಅಕ್ವಾಡೆಕ್ಟ್ ಕುಡಿಯುವ ನೀರಿಗಾಗಿ ಜಿಲ್ಲೆಯ ತುಂಬಾ ಹತ್ತು ಹಲವು ಕೆರೆಗಳನ್ನು ತುಂಬಿದ್ದರು ಈ ಯಾವುದೇ ಯೋಜನೆಯು ನಮ್ಮ ಕನ್ನೂರ ಭಾಗಗಳಿಗೆ ಅನುಕೂಲವಾಗಿಲ್ಲ. ಹಾಗೂ ನಮ್ಮ ಯಾವ ಕೆರೆಗಳು ಈ ಯೋಜನೆಯಲ್ಲಿ ಇಲ್ಲದಿರುವುದು ಖೇದಕರ ಸಂಗತಿಯಾಗಿದೆ ಎಂದರು. ನೀರಾವರಿ ಎಲ್ಲ ಯೋಜನೆಗಳು ನಮ್ಮ ಭಾಗದಲ್ಲಿ ಹಾಯ್ದು ಹೋಗುತ್ತಿವೆ. ಆದರೂ ಕೂಡ ನಮಗೆ ಕುಡಿಯಲು ನೀರಿನ ಸೌಲಭ್ಯ ನೀಡದೆ ಇರುವುದು ಸರ್ಕಾರದ ಮಲತಾಯಿ ಧೋರಣೆಯಾಗಿದೆ.
ಈ ಸಂದರ್ಭದಲ್ಲಿ ಗುರು ಅಚಕನಳ್ಳಿ ಮಾತನಾಡಿ, ಗಾಂಧೀಜಿಯವರ ಅಹಿಂಸಾ ಮಾರ್ಗದಲ್ಲಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಚೌಕಟ್ಟಿನಲ್ಲಿ ನಾವು ನಮ್ಮ ಹಕ್ಕನ್ನು ನಮಗೆ ನೀಡುವಂತೆ ಕೇಳುತ್ತಿದ್ದೇವೆ. ನಮ್ಮ ಕನ್ನೂರಿನ ಭಾಗದಲ್ಲಿ ಕುಡಿಯಲು ನೀರಿಲ್ಲ. ನಮ್ಮ ಊರಲ್ಲೇ ರೇವಣಸಿದ್ಧೇಶ್ವರ ಏತ ನೀರಾವರಿ ಹಾಯ್ದು ಹೋಗಿದೆ. ಆದರೆ ನಮ್ಮ ಭಾಗದಲ್ಲಿ ನೀರಾವರಿ ಸೌಲಭ್ಯವಿಲ್ಲ. ಒಂದು ಬೊಗಸೆ ನೀರು ಕೊಡಿ, ದಯಮಾಡಿ ನಮಗೆ ನೀರು ಕೊಡಿ, ಬೊಗಸೆ ನೀರು ಕೊಡಿ. ನಮಗೆ ನೀರಾವರಿ ಸೌಲಭ್ಯ ಒದಗಿಸಬೇಕು. ಒದಗಿಸಿದರೆ ನಾವು ಯಾವುದೇ ಹೋರಾಟ ಮಾಡುವುದಿಲ್ಲ ಎಂದರು.
ಉಪವಾಸ ಸತ್ಯಾಗ್ರಹ ಕೂಡಲು ಬಂದಿದ್ದ ರೈತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೆಲವೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಆನಂದ ಕೆ. ಅವರು, ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಮಾಡಿ, ಒಂದು ವಾರದಲ್ಲಿ ತಮ್ಮ ಎಲ್ಲ ಸಮಸ್ಯೆಗಳನ್ನು ತಿಳಿದುಕೊಂಡು ರೈತರ ಸಮಸ್ಯೆಯನ್ನು ಬಗೆ ಹರಿಸಿಕೊಡುವ ಭರವಸೆಯನ್ನು ನೀಡಿ ಆಮರಣ ಉಪವಾಸ ಸತ್ಯಾಗ್ರಹವನ್ನು ಇಲ್ಲಿಗೆ ಕೈ ಬಿಡಬೇಕೆಂದು ರೈತರಲ್ಲಿ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಕನ್ನೂರ ಹಾಗೂ ಮಡಸನಾಳ, ಕನ್ನಾಳ, ಗುಣಕಿ ಮತ್ತು ಗುಣಕಿ ತಾಂಡಾ, ಬೊಮ್ಮನಹಳ್ಳಿ, ಮಿಂಚನಾಳ ಮತ್ತು ಮಿಂಚನಾಳ ತಾಂಡಾ, ಶಿರನಾಳ, ಮಖಣಾಪೂರ ಮತ್ತು ಮಖಣಾಪೂರ ತಾಂಡಾ, ತಿಡಗುಂದಿ, ಹಾಗೂ ಡೊಮನಾಳ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.