ಸಂತಸದ ಕಲಿಕೆಗೆ ಪ್ರಾಧಾನ್ಯತೆ ನೀಡಿ-ಎ ಆರ್ ಮುಜಾವರ
ಇಂಡಿ: ಶಿಕ್ಷಕರು ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡುತ್ತಾ, ಸಂತಸದ ಕಲಿಕೆಗೆ ಪ್ರಾಧಾನ್ಯತೆ ನೀಡಬೇಕು ಎಂದು ವಿಜಯಪುರ ಡೈಯಟ್‌ನ ಹಿರಿಯ ಉಪನ್ಯಾಸಕ ಎ ಆರ್ ಮುಜಾವರ ಹೇಳಿದರು.
ಅವರು ಮಂಗಳವಾರದಂದು ಪಟ್ಟಣದ ಗುರುಭವನದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ ಇವರ ಸಹಯೋಗದಲ್ಲಿ ಜರುಗಿದ ಕಲಿಕಾ ಫಲ ಆಧಾರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಓದು, ಬರಹ ಹಾಗೂ ಅಭಿವ್ಯಕ್ತಿ ಸಾಮರ್ಥ್ಯಗಳ ಕಲಿಕೆಗೆ ಶಿಕ್ಷಕರ ಪ್ರೇರಣೆ ಅವಶ್ಯ ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಅಭಿವ್ಯಕ್ತಿ ಸಾಮರ್ಥ್ಯಗಳನ್ನು ಹೊರತರಲು ಗುಣಾತ್ಮಕ, ಸೃಜನಾತ್ಮಕ ಚಟುವಟಿಕೆಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಬಿ ಆರ್ ಪಿ ಅಧಿಕಾರಿಗಳಾದ ಎ ಜಿ ಚೌಧರಿ, ಎಸ್ ಕೆ ಕೋಲಾರ, ಬಸವರಾಜ ಗೋರನಾಳ ಹಾಗೂ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾದ ಸಂತೋಷ ಬಂಡೆ, ಈರಣ್ಣ ಕಂಬಾರ, ಎಸ್ ಆರ್ ಚಾಳೇಕರ, ಆರ್ ಎಲ್ ಹಜೇರಿ, ಎಸ್ ಬಿ ಅಂಗಡಿ, ಎಮ್ ಎ ಲಕ್ಕಡಹಾರ ಸೇರಿದಂತೆ ತಾಲೂಕಿನ ಶಿಕ್ಷಕರು ಉಪಸ್ಥಿತರಿದ್ದರು.