ಸವದಿಗೆ ಸಚಿವ ಸ್ಥಾನ ನೀಡಿ..!
ಇಂಡಿ: ಸಿದ್ದೇಶ್ವರ ಶ್ರೀಗಳ ಹೆಸರಿನಲ್ಲಿ ಒಂದು ಸಾವಿರ ಎಕರೆ ಜಮೀನು ಪ್ರದೇಶದಲ್ಲಿ ಅರಣ್ಯವನ್ನು ನಿರ್ಮಿಸಿ ಅದೇ ಸ್ಥಳದಲ್ಲಿ ವಿಜ್ಞಾನ ಕೇಂದ್ರ ನಿರ್ಮಾಣ ಮಾಡಿ ಶ್ರೀಗಳಿಗೆ ಗೌರವಿಸುವ ಕಾರ್ಯ ಮಾಡಲಾಗುತ್ತದೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ, ವಿಜಯಪೂರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್
ಮಾತನಾಡಿದರು.
ಅವರು ಶುಕ್ರವಾರ ವಿಜಯಪೂರ ರಸ್ತೆಯ ಕ್ರೀಡಾಂಗಣದ ಹತ್ತಿರ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮೀಜಿ ಸಭಾಭವನದ ಭೂಮಿ ಪೂಜಾ ಕಾರ್ಯಕ್ರಮ ಹಾಗೂ ವಿಜಯಪುರ ಜಿಲ್ಲಾ ಗಾಣಿಗ ಸಮಾಜದ ಬೃಹತ್ ಸಮಾವೇಶದಲ್ಲಿ ಮಾತನಾಡಿದರು. ಸುತ್ತೂರು ಶ್ರೀಗಳು ಹಾಗೂ ಅನೇಕ ಶ್ರೀಗಳ ಆಶಯ ಇದಾಗಿದ್ದು ಈ ವಿಷಯದ ಅಂಗವಾಗಿ ನಾನು ಈಗಾಗಲೇ ಕಾರ್ಯೋನ್ಮುಖನಾಗಿದ್ದೇನೆ ಎಂದರು.
ಕಾರ್ಯಕ್ರಮದ ಭೂಮಿಪೂಜೆ ನೆರವೇರಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ,
ಸಿದ್ದೇಶ್ವರ ಶ್ರೀಗಳ ಹೆಸರು ಸೂರ್ಯ ಚಂದ್ರ ಇರುವವರೆಗೂ ಇರಬೇಕು ಎನ್ನುವ ಸದುದ್ದೇಶದಿಂದ
ಸಿದ್ದೇಶ್ವರ ಶ್ರೀಗಳ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 5 ಕೋಟಿ ರೂಪಾಯಿ ಅನುದಾನವನ್ನು ನೀಡಲಾಗಿದೆ. ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಲಕ್ಷ್ಮಣ್ ಸವದಿ ಅವರ ಪಾತ್ರವೂ ಬಹು ಮುಖ್ಯವಾಗಿದೆ.
ಲಕ್ಷ್ಮಣ್ ಸವದಿಯವರು ಕರೆಕೊಟ್ಟ ಕಾರಣ ರಾಜ್ಯದಲ್ಲಿ ಇಡೀ ಗಾಣಿಗ ಸಮುದಾಯ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಹೆಚ್ಚಿನ ಸೀಟುಗಳು ಬರುವಂತೆ ಮಾಡಿದ್ದಾರೆ. ಹೀಗಾಗಿ ಸವದಿ ಅವರನ್ನು ಯಾರೂ ಮರೆಯುವಂತಿಲ್ಲ.
ನಾನು ಸಹ ಗಾಣಿಗ ಸಮುದಾಯದ ಪರ ಇದ್ದು ಸವದಿ ಅವರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಅಥಣಿ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಯಶವಂತರಾಯಗೌಡ ಪಾಟೀಲ್ ಅವರು ಗಾಣಿಗ ಸಮಾಜದ ಮೇಲೆ ಅತೀ ಕಾಳಜಿ ಇಟ್ಟು ಸಮುದಾಯ ಭವನಕ್ಕೆ 5 ಕೋಟಿ ಅನುದಾನ ನೀಡಿದ್ದಾರೆ ಅವರಿಗೆ ಅಭಿನಂದಿಸುತ್ತೇನೆ. ಗಾಣಿಗ ಸಮಾಜ ಸ್ವಾಭಿಮಾನಿ
ಸಮುದಾಯವಾಗಿದೆ. ನೀವು ನೀಡಿದ ಐದು ಕೋಟಿ ಅನುದಾನ ಅವರ ಹೃದಯವನ್ನು ಮುಟ್ಟಿದೆ. ನೀವು ಒಟ್ಟು ಐದು ಬಾರಿ ಶಾಸಕರಾಗುವವರೆಗೂ ನಮ್ಮ ಗಾಣಿಗ
ಸಮುದಾಯ ನಿಮ್ಮ ಕೈ ಬಿಡುವುದಿಲ್ಲ ಎಂದರು.
ಜಿಲ್ಲಾಮಟ್ಟದಲ್ಲಿ ವಿಜಯಪುರ ನಗರದಲ್ಲಿ ಆರು ಎಕರೆ ಜಮೀನಿನಲ್ಲಿ ವನಶ್ರೀ ಮಠವಿದ್ದು ಆ ಸ್ಥಳದಲ್ಲಿ ಅಭಿವೃದ್ಧಿ ಮಾಡಿದರೆ ಒಳಿತಾಗುತ್ತದೆ. ಅಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವಂತೆ ಆಗಬೇಕು ಅದನ್ನು ಮಾಡಿದರೆ ನನ್ನ ಕೈಲಾದಷ್ಟು ಅಳಿಲು ಸೇವೆ ಮಾಡುತ್ತೇನೆ ಎಂದು ಸಮಾಜ ಬಾಂಧವರಿಗೆ ತಿಳಿಸಿದರು. ಕಾಂಗ್ರೆಸ್ ಸರ್ಕಾರ ಗಾಣಿಗ ಸಮುದಾಯವನ್ನು ಯಾವುದೇ ಕಾರಣಕ್ಕೂ 2ಎ ವರ್ಗದಿಂದ ಮೀಸಲಾತಿ ಹಿಂಪಡೆಯಲ್ಲ.
ಸಮಾಜ ಬಾಂಧವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ಒಂದು ವೇಳೆ ಸರಕಾರ ಮೀಸಲಾತಿ ತೆಗೆಯಲು ಮುಂದಾದಲ್ಲಿ ಈ ಭಾಗದ ಎಲ್ಲಾ ರಾಜಕಾರಣಿಗಳು ಸಮುದಾಯದ ಪರವಾಗಿ ನಿಲ್ಲುತ್ತೇವೆ ಎಂದರು. ಬಿಜೆಪಿ ಪಕ್ಷದಲ್ಲಿ ನನಗೆ ಅನ್ಯಾಯವಾದಾಗ
ನನ್ನ ಗಾಣಿಗ ಸಮುದಾಯದ ಜನ ಇಡೀ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ವಿರೋಧಿಸಿ ನಾನು ಸೇರಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಸಮುದಾಯದ
ಜನತೆಗೆ ನಾನು ಚಿರಋಣಿ. ನಾನು ಸಮಾಜಕ್ಕೆ ಯಾವತ್ತೂ ಚ್ಯುತಿ ತರುವ ಕೆಲಸ ಮಾಡಲ್ಲ. ನಾನು ಯಾವತ್ತಿದ್ದರೂ ಸಮಾಜಕ್ಕೆ ಹೂ ತರುವ ಕೆಲಸವನ್ನೇ ಮಾಡುತ್ತೇನೆ ಎಂದರು.
ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ 70 ವರ್ಷಗಳಿಂದ ಗಾಣಿಗ ಸಮಾಜದ ಒಬ್ಬರಿಗೂ ಗುರುತಿಸಿ ಮೇಲೆ ಎತ್ತುವ ಕೆಲಸ ಮಾಡಿಲ. ಯಾರೊಬ್ಬರಿಗೂ ಮಂತ್ರಿ ಮಾಡಿಲ್ಲ. ಲಕ್ಷ್ಮಣ ಸವದಿ ಅವರಿಗೆ ಈ ಬಾರಿ ಮಂತ್ರಿ ಮಾಡಲೇಬೇಕು ಆ ನಿಟ್ಟಿನಲ್ಲಿ ಜಿಲ್ಲೆಯ
ಸಚಿವರು ಶಾಸಕರು ಸವದಿ ಅವರಿಗೆ ಬೆನ್ನಿಗೆ ನಿಲ್ಲಬೇಕು. ಗಾಣಿಗ ಸಮುದಾಯ ಶಿಕ್ಷಣದಲ್ಲಿ ಆರ್ಥಿಕತೆಯಲ್ಲಿ ಹಿಂದುಳಿದಿದೆ ಹೀಗಾಗಿ ಅಧಿಕಾರದಲ್ಲಿದ್ದ ಸಚಿವರು, ಶಾಸಕರು, ಗಾಣಿಗ ಸಮುದಾಯದ ಅಭಿವೃದ್ಧಿ ನಿಗಮ
ರಚಿಸಲು ಒತ್ತಾಯಿಸಿ ನಿಗಮ ಮಂಡಳಿ
ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಸಮುದಾಯ ಭವನಕ್ಕೆ ಸಿದ್ಧೇಶ್ವರ ಶ್ರೀಗಳ ಹೆಸರು ನಾಮಕರಣ ಮಾಡಿದ್ದರಿಂದ ಇದು ಗಾಣಿಗ ಸಮಾಜಕ್ಕೆ ಮಾತ್ರ ಮೀಸಲು ಮಾಡಲು ಸಾಧ್ಯವಿಲ.್ಲ ಹೀಗಾಗಿ ಈ ಸಮುದಾಯ ಭವನ ಸಮಸ್ತ ಸಮುದಾಯಗಳ
ಸಮಾಜ ಭವನವನ್ನಾಗಿ ಮಾಡಲಾಗುತ್ತದೆ ಎಂದು ಗಾಣಿಗ ಗುರುಪೀಠದ ಜಗದ್ಗುರು ಡಾ. ಜಯಬಸವ ಕುಮಾರಸ್ವಾಮಿಗಳು ಹೇಳಿದರು. ಸಿದ್ಧೇಶ್ವರ ಶ್ರೀಗಳು ತಮ್ಮ ಅಂತಿಮ ಅಭಿನಂದನಾ ಪತ್ರದಲ್ಲಿ ಹೇಳಿದಂತೆ ಅವರು ಯಾವದೇ ಒಂದು ಸಮಾಜಕ್ಕೆ ಸೀಮಿತರಲ್ಲ.
ಸಚಿವರಾದ ಎಂಬಿ ಪಾಟೀಲ್ ಅವರು ಸಹ ಅದೇ
ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಸಮುದಾಯ
ಭವನ ಸಿದ್ಧೇಶ್ವರ ಶ್ರೀಗಳ ಹೆಸರಿಗೆ ಚ್ಯುತಿ ಬಾರದಂತೆ ಆಗಬೇಕು. ಆ ನಿಟ್ಟಿನಲ್ಲಿ ಸರ್ವ ಸಮುದಾಯಗಳಿಗೂ
ಅನುಕೂಲವಾಗುವಂತೆ ಈ ಭವನ ನಿರ್ಮಿಸಲಾಗುವುದು ಎಂದರು. ಸಚಿವರಾದ ಎಂ.ಬಿ ಪಾಟೀಲ್, ಶಾಸಕ
ಯಶವಂತರಾಯಗೌಡ ಪಾಟೀಲ್ ಹಾಗೂ ಲಕ್ಷ್ಮಣ ಸವದಿ ಅವರು ಮನಸ್ಸು ಮಾಡಿದರೆ ಈ ಭಾಗದಲ್ಲಿ ಇನ್ನಷ್ಟು ಹೆಚ್ಚಿನ ಅಭಿವೃಧ್ಧಿ ಆಗುತ್ತದೆ. ವೇದಿಕೆಗಳ ಮೇಲೆ
ತಾಂತ್ರಿಕವಾಗಿ ಮಾತನಾಡುವುದನ್ನು ಬಿಟ್ಟು ನೀವು ಮೂವರೂ ಭಾವೈಕ್ಯತೆಯಿಂದ ಒಗ್ಗಟ್ಟಾಗಿ ಚರ್ಚಿಸಿದರೆ ಇಡೀ ಉತ್ತರ ಕರ್ನಾಟಕ ಅಭಿವೃದ್ಧಿ ಆಗಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಎಂ.ಬಿ. ಪಾಟೀಲರು ಹಾಗೂ ಯಶವಂತರಾಯಗೌಡರು ಹಿರಿಯ ರಾಜಕಾರಣಿ
ಲಕ್ಷ್ಮಣ ಸವದಿಯವರು ಒಂದೆಡೆ ಸೇರಿ ಉತ್ತಮ
ಚರ್ಚೆ ಮಾಡಿ ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು
ಸಲಹೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಚಳಕಾಪುರ ಸಿದ್ದಾರೂಢ ಮಠದ ಶಂಕರಾನಂದ ಮಹಾಸ್ವಾಮಿಗಳು, ಹಿರೇರೂಗಿ
ಮುಕ್ತಿಮಂದಿರದ ಸುಗಲಮ್ಮ ತಾಯಿ, ಕೊಪ್ಪಳದ ಕೇಶವಾನಂದ ಶ್ರೀಗಳು ವಹಿಸಿದ್ದರು. ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಚಿತ್ರದುರ್ಗ ನಗರ ಶಾಸಕ ಕೆ.ಸಿ. ವೀರೇಂದ್ರ, ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಸೇರಿದಂತೆ ಮತ್ತಿತರರು ಮಾತನಾಡಿದರು.
ವೇದಿಕೆಯಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೋಂಡ, ಸಿಂದಗಿ ಶಾಸಕ ಅಶೋಕ ಮನಗೂಳಿ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ,
ಮಾಜಿ ವಿ.ಪ ಸದಸ್ಯ ಜಿ.ಎಸ್. ನ್ಯಾಮಗೌಡ, ಗುರಣ್ಣ ಗೋಡಿ ಶರಣು ಬಿಲ್ಲಾಡ, ರಮೇಶ ಉಟಗಿ, ಅಶೋಕ
ಲಾಗಲೋಟಿ, ದಯಾಸಾಗರ ಪಾಟೀಲ, ಶಿವಯೋಗಪ್ಪ ನೇದಲಗಿ, ಅಣ್ಣಪ್ಪ ಖೈನೂರ, ಸೌಮ್ಯ ಕಲ್ಲೂರ, ಎ.ಎಸ್. ಗಾಣಿಗೇರ, ಶಕುಂತಲಾ ಕಲ್ಲೂರ ಸೇರಿದಂತೆ ಇನ್ನಿತರರು ಇದ್ದರು.
ಶುಕ್ರವಾರ ವಿಜಯಪೂರ ರಸ್ತೆಯ ಕ್ರೀಡಾಂಗಣದ ಹತ್ತಿರ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮೀಜಿ ಸಭಾಭವನದ
ಭೂಮಿ ಪೂಜಾ ಕಾರ್ಯಕ್ರಮ ಹಾಗೂ ವಿಜಯಪುರ ಜಿಲ್ಲಾ ಗಾಣಿಗ ಸಮಾಜದ ಬೃಹತ್ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು.