ಸಿರಗುಪ್ಪ: ರಾಜ್ಯಾದ್ಯಾಂತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನಿಯರ 75 ಸ್ಥಳಗಳನ್ನು ಗುರುತಿಸಿ, ಆ ಸ್ಥಳಗಳಲ್ಲಿ ಶಿಲಾ ಸ್ಮಾರಕ ನಿರ್ಮಿಸಿ, ವಿಜೃಂಭಣೆಯಿಂದ ಆಚರಿಸಿ, ಮರೆತು ಹೋದ ಮಹನೀಯ ಹೋರಾಟಗಾರರನ್ನು ಸ್ಮರಿಸುವ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಮೃತ ಭಾರತಿಗೆ ಕನ್ನಡದಾರತಿ ಎಂಬ ಹೆಸರಿನಲ್ಲಿ ಇಡೀ ರಾಜ್ಯಾದ್ಯಾಂತ ಆಚರಿಸಲಾಗುತ್ತಿದೆ ಎಂದು ತಹಸೀಲ್ದಾರ್ ಎನ್.ಆರ್. ಮಂಜುನಾಥಸ್ವಾಮಿ ಹೇಳಿದರು.
ನಗರದ ತಾಲೂಕು ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ರಾಜ್ಯದಲ್ಲಿ ಒಟ್ಟು 75 ಸ್ಥಳಗಳನ್ನು ಆಯ್ಕೆಮಾಡಿಕೊಳ್ಳಲಾಗಿದೆ.
ಆಯಾ ಸ್ಥಳಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ನಮ್ಮ ಜಿಲ್ಲೆಯಲ್ಲಿ ಬಳ್ಳಾರಿ ಮತ್ತು ಸಿರಗುಪ್ಪದ ಚಳ್ಳೆಕೂಡ್ಲೂರು ಗ್ರಾಮವನ್ನು ಆಯ್ಕೆಮಾಡಿಕೊಂಡಿದ್ದು, ನಮ್ಮ ತಾಲೂಕಿನಲ್ಲಿ ಜೂ.27 ರಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ ಚಳ್ಳೆಕೂಡ್ಲೂರು ಗ್ರಾಮದಲ್ಲಿ ಶಿಲಾ ಸ್ಮಾರಕ ನಿರ್ಮಿಸಿ ನಂತರ ನಗರದ ಗಾಂಧೀಜಿ ವೃತ್ತದಿಂದ ತಾಲೂಕು ಕ್ರೀಡಾಂಗಣದ ವರೆಗೆ ಜಾಥಾ ನಡೆಸಲಾಗುವುದು.
ಸಂಜೆ 5ಗಂಟೆಯಿಂದ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸರ್ಕಾರಿ ನೌಕರರು, ಸಂಘ ಸಂಸ್ಥೆಗಳ ಮುಖ್ಯಸ್ಥರು, ತಾಲೂಕಿನ ಗಣ್ಯರು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕರಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ತಾಲೂಕು ಸಮಿತಿ ಸಂಚಾಲಕರನ್ನಾಗಿ ಎಂ.ಎಸ್. ಸಿದ್ದಪ್ಪರನ್ನು ಜಿಲ್ಲಾ ಸಮಿತಿ ಆಯ್ಕೆಮಾಡಿದ್ದಾರೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಮಾಹಿತಿ ನೀಡಿದರು.