ಕಾಡಾನೆಗಳ ದಾಳಿ ಕಂಗಾಲದ ರೈತರು..!
ಹನೂರು : ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಕಾಟ ಜಾಸ್ತಿಯಾಗಿದ್ದು, ರೈತರಲ್ಲಿ ಆತಂಕವನ್ನು ಮೂಡಿಸುತ್ತಿದೆ. ಕಳೆದ 15 ದಿನಗಳಿಂದ ಕಾಡಾನೆ ರೈತರ ಜಮೀನುಗಳಿಗೆ ದಾಳಿ ಮಾಡಿ, ತಂತಿ ಕಲ್ಲು ಬೇಲಿ ಮತ್ತು ಬೆಳೆಗಳನ್ನು ನಾಶಪಡಿಸಿದೆ. ಅರಣ್ಯ ಅಧಿಕಾರಿಗಳು ತಡೆಗಟ್ಟಲು ವಿಫಲರಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಬಪ್ಪರ್ ಜೋನ್ ವಲಯದ ಬೆಲ್ಲದ ಕೆರೆ ಅರಣ್ಯ ಪ್ರದೇಶದಿಂದ ಕಾಡಾನೆ ರೈತರ ಜಮೀನುಗಳಿಗೆ ರಾತ್ರಿ ವೇಳೆ ಬರುತ್ತಿತ್ತು. ಕಳೆದ 15 ದಿನಗಳಿಂದ ರೈತರ ಜಮೀನಿನಲ್ಲಿರುವ ಕತ್ತಿ ಕಲ್ಲು ಬೇಲಿ ಮತ್ತು ಜಮೀನಿನಲ್ಲಿ ಬೆಳೆಯಲಾಗಿರುವ ಅಡಿಕೆ ಗಿಡ, ಬಾಳೆ, ತೆಂಗು ಮುಸುಕಿನ ಜೋಳ ಹಾಗೂ ಇನ್ನಿತರ ಬೆಳೆಗಳನ್ನು ರಾತ್ರಿ ವೇಳೆ ನುಗ್ಗಿ ನಾಶಪಡಿಸುತ್ತಿವೆ. ಇದರ ಬಗ್ಗೆ ಅರಣ್ಯ ಅಧಿಕಾರಿಗಳು ಕಾಡುಪ್ರಾಣಿಗಳು ರೈತರ ಜಮೀನುಗಳಿಗೆ ಬರುವುದನ್ನು ತಡೆಗಟ್ಟಲು ವಿಫಲರಾಗಿದ್ದಾರೆ.
ಇದರಿಂದಾಗಿಯೇ ದಿನನಿತ್ಯ ರೈತರ ಜಮೀನಿನಲ್ಲಿ ಬೆಳೆಯಲಾಗಿರುವ ಫಸಲನ್ನು ತಿಂದು ನಾಶಗೊಳಿಸಿ, ಜೊತೆಗೆ ರೈತರ ಜಮೀನಿನಲ್ಲಿರುವ ಪರಿಕರಗಳಾದ ಪೈಪ್, ಗೇಟ್ ವಾಲ್ ಇನ್ನಿತರ ಪರಿಕರಗಳನ್ನು ತುಳಿದು ನಾಶಗೊಳಿಸಿದೆ. ಅಪಾರ ಪ್ರಮಾಣವಾದ ಬೆಳೆ ನಷ್ಟವಾಗಿದ್ದು,ರೈತರು ಚಿಂತೆ ಮಾಡುವಂತಾಗಿದೆ. ಕೂಡಲೇ ಸಂಬಂಧಪಟ್ಟ ವಲಯ ಅರಣ್ಯ ಅಧಿಕಾರಿಗಳು ಜಮೀನಿಗೆ ತೆರಳಿ ರೈತರ ಜಮೀನಿನಲ್ಲಿ ಆಗಿರುವ ನಷ್ಟದ ಅಂದಾಜು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ರಾತ್ರಿ ವೇಳೆ ಬರುತ್ತಿರುವ ಕಾಡಾನೆಯನ್ನು ತಡೆಗಟ್ಟಬೇಕು. ಇಲ್ಲದಿದ್ದರೆ ಸಂಘ-ಸಂಸ್ಥೆಗಳ ಜೊತೆಗೂಡಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಇಲ್ಲಿನ ರೈತರ ಮಹೇಶ್ ನಂದಪ್ಪ ಅಮರೇಶ್ ಪ್ರತಿಶ್ ರವಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವರದಿ : ಚೇತನ್ ಕುಮಾರ್ ಎಲ್, ಹನೂರು ಚಾಮರಾಜನಗರ ಜಿಲ್ಲೆ.