ಮುದ್ದೇಬಿಹಾಳ:ತಾಲೂಕಿನ ನಾಲತವಾಡ ಹೋಬಳಿ ವ್ಯಾಪ್ತಿಯ ನಾಗಬೇನಾಳ-ವೀರೇಶನಗರ ಗ್ರಾಮದ ಹತ್ತಿರ ಹೊಲವೊಂದರಲ್ಲಿ ಗೂಡು ಕಟ್ಟಿ ಕುರಿಗಳನ್ನು ವಾಸ್ತವ್ಯಕ್ಕಾಗಿ ಬಿಟ್ಟಿದ್ದ ಕುರಿ ಮಂದೆಯ ಮೇಲೆ ತೋಳಗಳು ದಾಳಿ ನಡೆಸಿದ ಪರಿಣಾಮ ೧೦ ಕುರಿಗಳು ಬಲಿಯಾಗಿ, ೧೦ ಕುರಿಗಳು ಗಾಯಗೊಂಡು, ೫ ಕುರಿಗಳು ನಾಪತ್ತೆಯಾಗಿರುವ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದ್ದು ಗುರುವಾರ ಬೆಳಕಿಗೆ ಬಂದಿದೆ.
ನಾಗಬೇನಾಳದ ಬಸವರಾಜ ಸಿದ್ದಪ್ಪ ಸುಲ್ತಾನಪುರ ಎನ್ನುವವರು ಕುರಿಮಂದೆಯನ್ನು ರಾತ್ರಿ ಒಂದೆಡೆ ಗೂಡು ಹಾಕಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು. ರಾತ್ರಿ ಏಕಾಏಕಿ ತೋಳಗಳ ಹಿಂಡು ದಾಳಿ ಇಟ್ಟಿದೆ. ನೋಡುತ್ತಿದ್ದಂತೆಯೇ ಅಂದಾಜು ೪೦-೫೦ ಸಂಖ್ಯೆಯಷ್ಟಿದ್ದ ಕುರಿಗಳು ದೊಡ್ಡಿ ಹಾರಿ ಓಡಿ ಹೋಗಲು ಹವಣಿಸಿವೆ. ಅಷ್ಟರೊಳಗೆ ಹಲವು ಕುರಿಗಳು ತೋಳದ ದಾಳಿಗೆ ಸಿಕ್ಕಿವೆ. ಒಂದು ಕುರಿಮರಿಯನ್ನು ಇಬ್ಭಾಗ ಮಾಡಿ ಹೊಟ್ಟೆಯ ಭಾಗವನ್ನು ತಿಂದು ಹಾಕಲಾಗಿದೆ. ಇನ್ನುಳಿದ ಕುರಿಗಳನ್ನು ಅಲ್ಲಲ್ಲಿ ಕಚ್ಚಿ, ಚರ್ಮ, ಮಾಂಸ ಎಳೆದಾಡಿವೆ. ೯ ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದರೆ ಒಂದು ಕುರಿತ ಮಾತ್ರ ಬೆಳಿಗ್ಗೆ ೧೨ ಗಂಟೆಯಾದರೂ ವಿಲವಿಲ ಒದ್ದಾಡುತ್ತ ಜೀವ ಹಿಡಿದದ್ದು ಕಂಡು ಬಂತು. ಗಾಯಗೊಂಡಿರುವ ೧೦ ಕುರಿಗಳಿಗೆ ಪಶು ಇಲಾಖೆಯ ವೈದ್ಯರು ತಾತ್ಕಾಲಿಕ ಆರೈಕೆ ಮಾಡಿದ್ದು ಅವು ಪ್ರಾಣಾಪಾಯದಿಂದ ಪಾರಾಗಿವೆ.
ಈ ಭಾಗದಲ್ಲಿ ಆಗಾಗ ಕುರಿಗಳ ಮೇಲೆ ತೋಳಗಳ ದಾಳಿ ನಡೆಯುತ್ತದೆ ಒಂದೋ, ಎರಡೋ ಕುರಿಗಳನ್ನು ತೋಳ ಎತ್ತಿಕೊಂಡು ಹೋಗುತ್ತವೆ. ಆದರೆ ಈ ಘಟನೆಯಲ್ಲಿ ೧೦ ಕುರಿಗಳು ಸಾವನ್ನಪ್ಪಿರುವುದು ಕುರಿಗಾಹಿಗೆ ಆಘಾತ ಮೂಡಿಸಿದೆ. ಬಸವರಾಜನಿಗೆ ಅವರಿವರು ತಮ್ಮ ಕುರಿಗಳನ್ನು ಸಾಕಲು ಕೊಟ್ಟಿದ್ದರು. ಇದೀಗ ಅವರಿಗೆ ಏನು ಉತ್ತರ ಕೊಡಬೇಕು ಎನ್ನುವ ದಿಗ್ಭçಮೆಯಲ್ಲಿ ಅವರಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕ ಸಿ.ಎಸ್.ನಾಡಗೌಡ, ತಹಶೀಲ್ದಾರ್ ಕೀರ್ತಿ ಚಾಲಕ್, ತಾಪಂ ಇಓ ವೆಂಕಟೇಶ ವಂದಾಲ ಇನ್ನಿತರರು ಭೇಟಿ ನೀಡಿ ಘಟನೆಗೆ ವಿಷಾಧ ವ್ಯಕ್ತಪಡಿಸಿ ನೊಂದ ಕುರಿಗಾಯಿಗೆ ಸೂಕ್ತ ಪರಿಹಾರದ ವ್ಯವಸ್ಥೆಯ ಭರವಸೆ ನೀಡಿದರು.
ನಡಹಳ್ಳಿ ಭೇಟಿ: ವ್ಯವಸ್ಥೆ ವಿರುದ್ಧ ಆಕ್ರೋಶ
ಘಟನಾ ಸ್ಥಳಕ್ಕೆ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು ಭೇಟಿ ನೀಡಿ ಬಸವರಾಜನಿಂದ ಘಟನೆಯ ಮಾಹಿತಿ ಪಡೆದುಕೊಂಡರು. ಪೊಲೀಸರು ಬಂದು ಎಫೈಆರ್ ದಾಖಲಿಸುವವರೆಗೂ ಕುರಿಗಾಹಿಗೆ ಸರ್ಕಾರದ ಸೌಲಭ್ಯ, ಪರಿಹಾರ ಸಿಗುವುದಿಲ್ಲ ಎನ್ನುವುದನ್ನು ಅರಿತಿದ್ದ ಅವರು ಘಟನೆ ನಡೆದು ೧೨-೧೩ ಗಂಟೆಗಳ ಮೇಲಾದರೂ ಪೊಲೀಸರು, ಗ್ರಾಮ ಪಂಚಾಯಿತಿಯವರು, ಕಂದಾಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಘಟನೆಯ ವಿವರವನ್ನು ದಾಖಲಿಸಿಕೊಂಡು ಅಗತ್ಯ ಕ್ರಮ ಕೈಕೊಳ್ಳದಿರುವುದನ್ನು ಕೇಳಿ ಆಕ್ರೋಶಭರಿತರಾದರು. ನಡಹಳ್ಳಿಯವರು ಬರುವ ಸಮಯದಲ್ಲೇ ಅಲ್ಲಿಗೆ ಬಂದ ಗ್ರಾಮ ಆಡಳಿತಾಧಿಕಾರಿ ಗಂಗಾಧರ ಜೂಲಗುಡ್ಡ ಅವರನ್ನು ತರಾಟೆಗೆ ತೆಗೆದುಕೊಂಡು ಘಟನೆ ನಡೆದು ಬಹಳಷ್ಟು ಸಮಯವಾದರೂ ನೊಂದ ಕುರಿಗಾಹಿಗೆ ತಾತ್ಕಾಲಿಕ ಪರಿಹಾರ ಏಕೆ ವಿತರಿಸಿಲ್ಲ ಎಂದು ಹರಿಹಾಯ್ದರು. ಸ್ಥಳದಲ್ಲಿದ್ದ ಪಶು ಸಂಗೋಪನಾ ಇಲಾಖೆಯ ವೈದ್ಯರ ಕಾರ್ಯವನ್ನು ಪ್ರಶಂಶಿಸಿದ ಅವರು ಸರಿಯಾದ ವರದಿ ತಯಾರಿಸಿ ಕುರಿಗಾಹಿಗೆ ಸರ್ಕರ ನಿಗದಿಪಡಿಸಿದ ಪರಿಹಾರ ದೊರಕಿಸಿಕೊಡುವಂತೆ ತಿಳಿಸಿದರು. ಪಿಎಸೈ ಜೊತೆ ಮೋಬೈಲ್ ಫೋನ್‌ನಲ್ಲಿ ಮಾತನಾಡಿ ಇದುವರೆಗೂ ಪೊಲೀಸರನ್ನು ಕಳಿಸದೆ, ಎಫ್‌ಐಆರ್ ದಾಖಲಿಸದೆ ಬೇಜವಾಬ್ಧಾರಿ ತೋರಿದ ನಡವಳಿಕೆಯನ್ನು ಖಂಡಿಸಿ ಕೂಡಲೇ ಪೊಲೀಸರನ್ನು ಸ್ಥಳಕ್ಕೆ ಕಳಿಸುವಂತೆ ತಿಳಿಸಿದರು. ಪಿಡಿಓ ಮುರುಗೆಮ್ಮ ಪೀರಾಪುರ ಅವರಿಗೆ ಸೂಚಿಸಿ ತಕ್ಷಣ ಗಾಯಗೊಂಡ, ಬದುಕುಳಿದ ಕುರಿಗಳಿಗೆ ಮೇವಿನ ವ್ಯವಸ್ಥೆ ಮಾಡುವಂತೆ ತಿಳಿಸಿದರು. ನಿರ್ಗಮಿಸುವಾಗ ಆಗಮಿಸಿದ ಮೂವರು ಪೊಲೀಸ್ ಪೇದೆಗಳನ್ನು ಜನರ ಎದುರೇ ತರಾಟೆಗೆ ತೆಗೆದುಕೊಂಡ ನಡಹಳ್ಳಿಯವರು ನೀವೂ ಕೂಡ ರೈತರ ಮಕ್ಕಳಾಗಿದ್ದು ರೈತರ ಕಷ್ಟಕ್ಕೆ ತಕ್ಷಣ ಸ್ಪಂಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ನೊಂದ ಕುರಿಗಾಯಿ ರೈತನಿಗೆ ಸೂಕ್ತ ಪರಿಹಾರ ಸಿಗದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷರಾದ ಎಂ.ಎಸ್.ಪಾಟೀಲ, ಕೆ.ಆರ್.ಬಿರಾದಾರ, ಮುಖಂಡರಾದ ಗಿರೀಶಗೌಡ ಪಾಟೀಲ, ರವೀಂದ್ರ ಬಿರಾದಾರ, ಮುದಕಪ್ಪ ಗಂಗನಗೌಡರ, ಜಿ.ಮಹಾಂತಗೌಡ ಗಂಗನಗೌಡರ, ಈರಣ್ಣ ಮುದ್ನೂರ, ಸಂಗಪ್ಪ ಹಾವರಗಿ, ಭೀಮಣ್ಣ ಗುರಿಕಾರ, ಸಂಗಣ್ಣ ಸುಲ್ತಾನಪೂರ, ಭೀಮಣ್ಣ ರಕ್ಕಸಗಿ, ಮಣಿಕಂಠ ಆರೇಶಂಕರ ಇನ್ನಿತರರು ಇದ್ದರು.