ಜೀವ ರಕ್ಷಣೆಗೆ ಪ್ರತಿ ಹೆಜ್ಜೆಯೂ ಮಹತ್ವದ್ದು
ವಿಜಯಪುರ: ಶಾಸಕರು ಹಾಗೂ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರಾದ ಬಸನಗೌಡ ಪಾಟೀಲ ಯತ್ನಾಳರವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸೂಪರ್ ಸ್ಪೇಶಾಲಿಟಿ (ಜೆ.ಎಸ್.ಎಸ್) ಆಸ್ಪತ್ರೆಯಲ್ಲಿ ಈಚೆಗೆ ಯು.ಎಸ್.ವಿ ಪ್ರೈವೇಟ್ ಲಿಮಿಟೆಡ್ನ ಕ್ರೆಸ್ಟ್ ತಂಡದಿಂದ ಬೇಸಿಕ್ ಲೈಫ್ ಸಪೋರ್ಟ್ (ಬಿ.ಎಲ್.ಎಸ್) ತರಬೇತಿ ಕಾರ್ಯಕ್ರಮ ಜರುಗಿತು.
ಇತ್ತೀಚೆಗೆ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿಪತ್ತು ಸಂದರ್ಭಗಳಲ್ಲಿ ಪ್ರಥಮ ಸಹಾಯ ಮತ್ತು ಸಿ.ಪಿ.ಆರ್ ಕೌಶಲ್ಯದ ಮಹತ್ವದ ಅರಿವನ್ನು ಮೂಡಿಸಲು ಹಾಗೂ ಆಸ್ಪತ್ರೆಯ ಸಿಬ್ಬಂದಿಯನ್ನು ಸಜ್ಜುಗೊಳಿಸಲು ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ, ತುರ್ತು ಸ್ಥಿತಿಗಳನ್ನು ಧೈರ್ಯದಿಂದ ಎದುರಿಸಲು ಅಗತ್ಯವಿರುವ ತಂತ್ರಜ್ಞಾನದ ಜೊತೆಗೆ ತ್ವರಿತ ಕಾರ್ಯ ಪ್ರವೃತ್ತಿಯ ಕೌಶಲ್ಯಗಳನ್ನು ಹಾಗೂ ಹೃದಯಾಘಾತದ ಸಂದರ್ಭದಲ್ಲಿ ತಕ್ಷಣ ಏನು ಮಾಡಬೇಕು, ಹೇಗೆ ರಕ್ಷೀಸಬೇಕು ಎಂಬ ಅರಿವು ಮತ್ತು ನೈಪುಣ್ಯತೆ ತಿಳಿಸಲಾಯಿತು.
ತರಬೇತಿ ನೀಡಿದ ಕೇರಳದ ಡಾ.ಹರಿ ಶಂಕರ, ತರಬೇತಿಯು ಆರೋಗ್ಯ ಸೇವೆಯಲ್ಲಿ ನವೀನ ಹಾಗೂ ಮಾನವೀಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತಿದೆ. ಇದು ಕೆವಲ ಚಿಕಿತ್ಸೆಗೆ ಅಲ್ಲ, ಜೀವ ಉಳಿಸುವ ಸ್ಪೂರ್ತಿಗೆ ದಾರಿ ತೋರಿಸುತ್ತಿದೆ. ಜೀವ ರಕ್ಷಣೆಗೆ ಪ್ರತಿ ಹೆಜ್ಜೆಯೂ ಮಹತ್ವದ್ದು ಎಂದರು.
ಡಾ.ಶಿರೋಜ್ ಬಾಂಬೆವಾಲಾ, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶರಣ ಮಳಕೇಡ್ಕರ್ ಸೇರಿದಂತೆ ಆಸ್ಪತ್ರೆಯ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


















