ಘೋಣಸಗಿ ಗ್ರಾಮದಲ್ಲಿ ರೋಜಗಾರ್ ದಿವಸ್ ಕಾರ್ಯಕ್ರಮ ಆಚರಣೆ
ಕೂಲಿ ಅರಸಿ ಬರುವ ಪ್ರತಿ ಕೂಲಿಕಾರರಿಗೂ ಕೆಲಸದ ಖಾತರಿಯಿದೆ: ಪಿಡಿಓ ವಿಠ್ಠಲ ಹಟ್ಟಿ
ತಿಕೋಟಾ: ತಾಲೂಕಿನ ಘೋಣಸಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡ ಕೆರೆ ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಮಾಹಿತಿ, ಶಿಕ್ಷಣ & ಸಂವಹನ ಕಾರ್ಯಕ್ರಮದಡಿ ಆಯೋಜಿಸಲಾದ ರೋಜಗಾರ್ ದಿವಸ್ ಕಾರ್ಯಕ್ರಮದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವಿಠ್ಠಲ ಹಟ್ಟಿ ಮಾತನಾಡಿದರು.
“ಈ ಬೇಸಿಗೆ ಅವಧಿಯಲ್ಲಿ ನರೇಗಾ ಕೂಲಿಕಾರರಿಗೆ ನಿರಂತರವಾಗಿ 100 ದಿನಗಳ ಉದ್ಯೋಗ ಒದಗಿಸುವುದು ಆ ಮೂಲಕ ಗ್ರಾಮೀಣ ಆಸ್ತಿಗಳ ರಚನೆ ಮಾಡುವುದು, ಜಲ ಸಂರಕ್ಷಣೆ ಮಾಡಿ ಅಂತರ್ಜಲ ಮಟ್ಟ ವೃದ್ಧಿಸುವ ಕಾಮಗಾರಿಗಳನ್ನು ಯಶಸ್ವಿಯಾಗಿ ನಿರ್ಮಾಣ ಮಾಡುವುದು ಈ ದುಡಿಯೋಣ ಬಾ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ಅಭಿಯಾನದ ಅಂಗವಾಗಿ ಈಗಾಗಲೇ ನಮ್ಮ ಗ್ರಾಮ ಪಂಚಾಯತಿಯಲ್ಲಿ ಮನೆ-ಮನೆ ಭೇಟಿ, ಸ್ವ-ಸಹಾಯ ಸಂಘದ ಸಭೆ, ಮಹಿಳಾ ವಿಶೇಷ ಗ್ರಾಮ ಸಭೆ, ವಾರ್ಡ್ ಸಭೆ, ಕರಪತ್ರ ವಿತರಣೆಯಂತಹ ವಿವಿಧ ಐಇಸಿ ಚಟುವಟಿಕೆಗಳ ಮೂಲಕ ಅರಿವು ಮೂಡಿಸಲಾಗಿದ್ದು ಅದರ ಫಲವಾಗಿ ಇಂದು ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 250 ಜನ ಕೂಲಿಕಾರರು ವಿವಿಧ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ನಾವು ಶೇ.60%ಗಿಂತ ಹೆಚ್ಚಿಗೆ ಹೆಣ್ಣು ಮಕ್ಕಳಿಗೆ ಅವಕಾಶ ನೀಡಿದ್ದೇವೆ ಎಂದರು. ಇದರ ಜೊತೆ-ಜೊತೆಗೆ ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕೃಷಿಹೊಂಡ, ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ, ಮಾವು, ಚಿಕ್ಕು, ನಿಂಬೆ, ನುಗ್ಗೆ ಇತರೆ ಬೆಳೆಗಳನ್ನು ಬೆಳೆಯಲು ನರೇಗಾದಡಿ ಕೂಲಿ ಮೊತ್ತ ನೀಡುತ್ತಿದೆ. ಇಲ್ಲಿಯೂ ಕೆಲಸ ಮಾಡಿ ಕೂಲಿ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.
ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ಮಾತನಾಡಿ “ನಮ್ಮ ಮನರೇಗಾ ಯೋಜನೆಯಡಿ ವಿಶೇಷವಾಗಿ ಮಹಿಳೆಯರಿಗೆ, ವಿಶೇಷ ಚೇತನರಿಗೆ, ಹಿರಿಯ ನಾಗರಿಕರಿಗೆ, ಲಿಂಗತ್ವ ಅಲ್ಪಸಂಖ್ಯಾತರಿಗೆ, ದುರ್ಬಲ ವರ್ಗದವರಿಗೆ ವಿಶೇಷ ಆಧ್ಯತೆ ನೀಡಲಾಗುತ್ತಿದೆ. ಕಡ್ಡಾಯವಾಗಿ 60% ಮಹಿಳೆಯರ ಭಾಗವಹಿಸುವಿಕೆಯನ್ನು ನಿರ್ವಹಣೆ ಮಾಡಲು ಈಗಾಗಲೇ ಎಲ್ಲ ಗ್ರಾಮ ಪಂಚಾಯತಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ನೋಂದಾಯಿತ ವಿಶೇಷಚೇತನರಿಗೆ 100 ದಿನಗಳ ಕೆಲಸ ಖಾತರಿಪಡಿಸಿಕೊಳ್ಳಲು ಸಹ ತಿಳಿಸಲಾಗಿದೆ. ಅದರಂತೆ, ಘೋಣಸಗಿ ಗ್ರಾಮ ಪಂಚಾಯತಿಯಲ್ಲಿ 61% ಮಹಿಳೆಯರಿಗೆ ಅವಕಾಶ ನೀಡಿದೆ. ಜೊತೆಗೆ ಗ್ರಾಮದ ಹಿರಿಯರಿಗೆ ವಿಶೇಷಚೇತನರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈಗಾಗಲೇ ಕಳೆದ ಕೆಲ ದಿನಗಳಿಂದ ಕೈಗೊಂಡ ಕಾಮಗಾರಿ ಸ್ಥಳದಲ್ಲಿ ನೀರು ಸಂಗ್ರಹವಾಗಿದ್ದು, ಯೋಜನೆಯ ಫಲಶೃತಿಗೆ ಹಿಡಿದ ಕೈಗನ್ನಡಿಯಾಗಿದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಂಜನಾ ಸುರೇಶ ಪವಾರ, ಸದಸ್ಯರಾದ ಮೈಬೂಬ ಜತ್ತಿ, ಕಸ್ತೂರಿ ಮಾಳಿ, ಸುರೇಖಾ ಸಂಜು ರಾಠೋಡ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವಿಠ್ಠಲ ಹಟ್ಟಿ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಗ್ರಾಮ ಸ್ವರಾಜ್ ಅಭಿಯಾನದ ರಾಜ್ಯ ತರಬೇತಿದಾರ ರಮೇಶ ಭಜಂತ್ರಿ, ಗ್ರಾಮ ಪಂಚಾಯತಿಯ ಶಂಕರ ಭೋಯಿನ, ಪಾರ್ವತಿ ಮುರೆಪ್ಪ ಮಗಧರಿ ಸೇರಿದಂತೆ ಕಾಯಕ ಬಂಧುಗಳು, 100ಕ್ಕೂ ಅಧಿಕ ಕೂಲಿಕಾರರು ಹಾಜರಿದ್ದರು.


















