ಸಿರವಾರ: ಪಟ್ಟಣದಲ್ಲಿ ಜೋಳ ಖರೀದಿ ಕೇಂದ್ರ ಏಕಾಏಕಿ ಸ್ಥಾಪನೆಗೊಂಡಿದ್ದು ರೈತರಿಗೆ ಎರಡೇ ದಿನದ ಅವಧಿ ನೀಡಲಾಗಿದೆ. ಕೇಂದ್ರ ಸ್ಥಾಪನೆ ಉದ್ದೇಶ ರೈತರ ಉಪಯೋಗಕ್ಕೆ ಬಾರದಂತಾಗಿದ್ದು ಕಾಟಾಚಾರಕ್ಕೆ ಎನ್ನುವoತಾಗಿದೆ.
ರಾಜ್ಯ ಸರಕಾರ ರಾಜ್ಯಾದ್ಯಂತ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿದೆ. ಈಗಾಗಲೇ ರಾಜ್ಯಾದ್ಯಂತ ಕೇಂದ್ರಗಳಲ್ಲಿ ಚಟುವಟಿಕೆಗಳು ನಡೆದಿವೆ. ಜನೇವರಿ 1 ರಿಂದ ಮಾರ್ಚ್ 31 ರವರೆಗೆ ಕಾರ್ಯನಿರ್ವಹಿಸಲು ಸರಕಾರ ನಿರ್ಧಾರ ಕೈಗೊಂಡು ಖರೀದಿಯನ್ನು ಆರಂಭಿಸಿತ್ತು. ಆದರೆ ಜನೇವರಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದ್ದ ಕೇಂದ್ರದ ಸ್ಥಾಪನೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ವಿಳಂಬವಾಗಿತ್ತು. ಸಕಾಲಕ್ಕೆ ಕೇಂದ್ರ ತೆರೆದು ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿತ್ತು. ಆದರೆ ಈಗ ದಿಡೀರನೆ ತೆರೆದ ಕೇಂದ್ರದಿಂದಾಗಿ ಹೆಚ್ಚಿನ ರೈತರಿಗೆ ಇದರ ಬಗ್ಗೆ ಮಾಹಿತಿ ಇಲ್ಲದಂತಾಗಿದೆ. ಕಾಟಾಚಾರದ ಕೇಂದ್ರದ ಸ್ಥಾಪನೆಯಿಂದಾಗಿ ರೈತರಿಗೆ ಪ್ರಯೋಜನ ಇಲ್ಲದಂತೆ ಮಾಡಿದೆ.
ರೈತರ ಒತ್ತಾಯ : ಪಟ್ಟಣದಲ್ಲಿ ಜೋಳ ಖರೀದಿ ಕೇಂದ್ರವನ್ನು ಏಕಾಏಕಿ ತೆರೆಯಲಾಗಿದೆ. ಬುಧವಾರ ಮತ್ತು ಗುರುವಾರ ಸೇರಿ ಕೇವಲ ಎರಡು ದಿನಗಳವರೆಗೆ ಅವಧಿಯನ್ನು ನೀಡಲಾಗಿದೆ. ಆದರೆ ಸಾಕಷ್ಟು ರೈತರಿಗೆ ಇದರ ಬಗ್ಗೆ ಮಾಹಿತಿನೇ ಇಲ್ಲಾ. ಈಗಾಗಲೇ ಗೊತ್ತಿರುವ ರೈತರು ಕೇಂದ್ರಕ್ಕೆ ಬರುತ್ತಿದ್ದಾರೆ. 31 ಕ್ಕೆ ಕೊನೆಯ ದಿನ ನೀಡಲಾಗಿದ್ದು ಅದನ್ನು ಇನ್ನೂ 10 ದಿನಕ್ಕೆ ಹೆಚ್ಚಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.