ಅಫಜಲಪುರ: ಮನುಷ್ಯ ನಿಸರ್ಗದ ಜೊತೆ ಬೆರತು ಬಾಳಬೇಕು. ಮನೆ, ಜಮೀನುಗಳಲ್ಲಿ ಗಿಡ-ಮರಗಳನ್ನು ಬೆಳಸಬೇಕು. ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಸುಂದರ ಪರಿಸರ ನಿರ್ಮಿಸಿ, ರೋಗಮುಕ್ತ ಸಮಾಜ ನಿರ್ಮಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಶಿವರಾಜ ಆಚಾರ್ಯ ಹೇಳಿದರು.
ಅವರು ತಾಲೂಕಿನ ಕರಜಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದರೆ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಗಿಡ-ಮರ ಕಡಿದು ಪರಿಸರಕ್ಕೆ ಹಾನಿ ಮಾಡದೆ ಮಕ್ಕಳಂತೆ ಪೋಷಣೆ ಮಾಡಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳ ದೆಸೆಯಲ್ಲಿಯೇ ಈ ರಕ್ಷಣಾ ಕಾರ್ಯವನ್ನು ಮಾಡಬೇಕು. ಜೂನ್ ಅಂತ್ಯದೊಳಗೆ ಜಿಲ್ಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ
ಮಾರ್ಗದರ್ಶನದಂತೆ 1 ಲಕ್ಷ ಸಸಿ ನಾಟಿ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಚಂದ್ರಕಾಂತ ಬುರಕಲ್, ಪತ್ರಕರ್ತ ಬಶೀರ ಅಹ್ಮದ ಚೌಧರಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸುನಂದಾ ಭಿಂಗೆ, ವಲಯ ಮೇಲ್ವಿಚಾರಕ ಅನೀಲ ದಾವನೆ ಸೇರಿದಂತೆ ಒಕ್ಕೂಟದ ಅದ್ಯಕ್ಷರು ಸೇವಾಪ್ರತಿನಿಧಿಗಳು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.