ಮಹಿಳೆಯರ ಸಬಲೀಕರಣವೇ ಸ್ವಶಕ್ತ ಮತ್ತು ಸಮೃದ್ಧ ರಾಷ್ಟ್ರದ ನಿರ್ಮಾಣಕ್ಕೆ ಅಡಿಪಾಯ
ವಿಜಯಪುರ : ಮಹಿಳೆಯರ ಸಬಲೀಕರಣವೇ ಸ್ವಶಕ್ತ ಮತ್ತು ಸಮೃದ್ಧ ರಾಷ್ಟ್ರದ ನಿರ್ಮಾಣಕ್ಕೆ ಅಡಿಪಾಯವಾಗಿದೆ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್.ಲಕ್ಕಣ್ಣವರ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸ್ನಾತಕ ಅಧ್ಯಯನ ವಿಭಾಗದಲ್ಲಿ ಉದ್ಯಮಶೀಲತೆ ಮತ್ತು ಸ್ವ-ಉದ್ಯೋಗ ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣ ಎಂಬ ವಿಷಯದ ಕುರಿತು ಇತ್ತಿಚಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು ಮತ್ತು ಸೌಲಭ್ಯಗಳನ್ನು ಜಾರಿಗೆ ತಂದಿವೆ. ಆ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮುನ್ನಡೆಯಬೇಕು. ಮಹಿಳೆಯರ ಸಬಲೀಕರಣದಿಂದಲೇ ರಾಷ್ಟ್ರ ಸ್ವಾವಲಂಬಿಯಾಗಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೇ ಶಿಕ್ಷಣ, ಉದ್ಯೋಗ ಹಾಗೂ ನಿರ್ಣಯಾತ್ಮಕ ಕ್ಷೇತ್ರಗಳಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಸಮಾಜದ ಸಮಗ್ರ ಅಭಿವೃದ್ಧಿಗೆ ದಾರಿಯಾಗಿದೆ. ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಅರಿತು, ಆತ್ಮವಿಶ್ವಾಸದಿಂದ ಮುಂದೆ ಬರಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಅಜಿತ್ ಗುಜ್ಜಾರ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣವಂತರಾಗಿ ಕೇವಲ ಉದ್ಯೋಗಗಳತ್ತ ಮಾತ್ರ ಆಸಕ್ತಿ ತೋರದೆ, ಹೊಸ ಉದ್ದಿಮೆಗಳತ್ತ ಮುಖಮಾಡಬೇಕು. ಮುಂದಿನ ಭವಿಷತ್ತಿಗೆ ಉದ್ದಿಮೆಗಳು ಅವಶ್ಯಕ, ಸರ್ಕಾರ ನೀಡುತ್ತಿರುವ ವಿವಿಧ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಸ್ವಾವಲಂಬಿಗಳಾಗಿ ಸಬಲೀಕರಣದ ದಾರಿಯಲ್ಲಿ ಸಾಗಬೇಕು ಎಂದರು.
ಬಸವರಾಜ ಸನಪ ಮಾತನಾಡಿ, ಮಹಿಳೆಯರು ಶಿಕ್ಷಣ ಪಡೆಯುವಲ್ಲಿ ಹಿಂದೇಟು ಹಾಕದೆ ಸಮಾಜದ ಮುಖ್ಯವಾಹಿನಿಗೆ ಬರಬೇಕು ಅಷ್ಟೇ ಅಲ್ಲದೇ ಮಹಿಳೆಯರು ಅಬಲೆಯರಲ್ಲ, ಪ್ರತಿಯೊಂದು ಕ್ಷೇತ್ರದಲ್ಲಿ ಮುನ್ನಡೆಯುವ ಮೂಲಕ ತಮ್ಮ ಹಕ್ಕುಗಳನ್ನು ತಾವು ಪಡೆಯಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಂತಾಬಾಯಿ ಕಾಂತಪ್ಪ ತೋಳನೂರ ಮಾತನಾಡಿ, ಅನಾದಿಕಾಲದಿಂದ ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದರೂ, ಇಂದು ಅವರಿಗೆ ಸ್ಥಾನಮಾನ ಮತ್ತು ರಕ್ಷಣೆಯನ್ನು ನೀಡುವುದು ಸಮಾಜದ ಕರ್ತವ್ಯವಾಗಿದೆ. ಮಹಿಳೆಯರ ಕುರಿತು ಸಮಾಜ ಪ್ರೇರಣಾತ್ಮಕ ವಾತಾವರಣವನ್ನು ನಿರ್ಮಿಸಿದಾಗ ಅವರಲ್ಲಿ ಆತ್ಮಸ್ಥೈರ್ಯ ವೃದ್ಧಿಯಾಗುತ್ತದೆ ಎಂದರು.ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದ ಸ್ನಾತಕ ಅಧ್ಯಯನ ವಿಭಾಗದ ವಿಶೇಷಾಧಿಕಾರಿ ಪ್ರೊ. ಸಕ್ಪಾಲ ಹೂವಣ್ಣ ಮಾತನಾಡಿ, ಪ್ರಾಚೀನ ಭಾರತದಲ್ಲಿ ಮಹಿಳೆಯರು ಮೌಢ್ಯಪದ್ದತಿಗಳಿಂದ ಬಂಧಿತರಾಗಿದ್ದರೂ, ಇಂದಿನ ಶಿಕ್ಷಣದ ಪ್ರಭಾವದಿಂದ ಸಮಾಜದಲ್ಲಿ ಗೌರವಪೂರ್ವಕವಾಗಿ ಬದುಕಿ ಉದ್ಯೋಗಾವಕಾಶಗಳನ್ನು ಪಡೆಯುವ ಮೂಲಕ ಸಬಲೀಕರಣದ ದಾರಿಯಲ್ಲಿ ಸಾಗುತ್ತಿದ್ದಾರೆ ಎಂದು ಹೇಳಿದರು.ಕಾರ್ಯಗಾರದ ಸಂಯೋಜಕಿ ಸ್ನಾತಕ ಅಧ್ಯಯನ ವಿಭಾಗದ ಡಾ. ಜಿ. ಸೌಭಾಗ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಕಾರ್ಯಾಗಾರಕ್ಕೂ ಮುನ್ನ ಸಂವಿಧಾನ ಪೀಠಿಕೆಯನ್ನು ಅತಿಥಿ ಉಪನ್ಯಾಸಕ ವಿರೇಶ ಜಿ. ಬೋಧಿಸಿದರು. ಮಹೇಶ್ ಕೋಮಾರ ಅತಿಥಿಗಳನ್ನು ಪರಿಚಯಿಸಿದರು. ವಿಶ್ವವಿದ್ಯಾನಿಲಯದ ಪಿ.ಎಂ. ಉಷಾ ವಿಭಾಗದ ನೋಡಲ್ ಅಧಿಕಾರಿ ಜಿ. ಬಿ. ಸೋನಾರ್, ಅತಿಥಿ ಉಪನ್ಯಾಸಕರು ಹಾಗೂ ಸ್ನಾತಕ ಮತ್ತು ಸ್ನಾತಕೋತ್ತರÀ ವಿದ್ಯಾರ್ಥಿನಿಯರು, ಬೋಧಕೇತರ ಸಿಬ್ಬಂದಿ ಮತ್ತು ಉಪಸ್ಥಿತರಿದ್ದರು.



















