ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ಜನಸಂಪರ್ಕ ಸಭೆ.
ಹನೂರು : ರೈತರು ಮತ್ತು ಸಾರ್ವಜನಿಕರು ಹಾಗೂ ಗ್ರಾಹಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಉದ್ದೇಶದಿಂದ ಪಟ್ಟಣದ ಚೆಸ್ಕಾಂ ಕಚೇರಿ ಆವರಣದಲ್ಲಿ ಅಧೀಕ್ಷಕ ಇಂಜಿನಿಯರ್ ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆಯನ್ನು ಆಯೋಜಿಸಲಾಯಿತು.
ಅಧೀಕ್ಷಕ ಇಂಜಿನಿಯರ್ ಸೋಮಶೇಖರ್ ರವರು ಮಾತನಾಡಿ ಕೆ ಆರ್ ಸಿ ವೃತ್ತ ಮಟ್ಟದ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ಜನಸಂಪರ್ಕ ಸಭೆಯನ್ನು ಕರೆಯುವ ಉದ್ದೇಶ ರೈತರ ಹಾಗೂ ಸಾರ್ವಜನಿಕರ ಕುಂದು ಕೊರತೆಗಳಿಗೆ ಆದಷ್ಟು ಬೇಗ ಬಗೆಹರಿಸಿ ಕೊಡುವುದಕ್ಕೆ ಎಂದು ತಿಳಿಸಿದರು. ಹಗಲು ಸಮಯದಲ್ಲಿ 7 ಗಂಟೆ ನಿರಂತರ ನೀಡಲು ಸಾಧ್ಯವಿಲ್ಲ, ಹೀಗಿರುವ ಪರಿಸ್ಥಿತಿಗೆ ಹಗಲು ವೇಳೆ 4 ಗಂಟೆ ರಾತ್ರಿ ವೇಳೆ 3 ಗಂಟೆ ವಿದ್ಯುತ್ ಕೊಡಲು ಸಾಧ್ಯ ಮಳೆ ಸರಿಯಾದ ಪ್ರಮಾಣದಲ್ಲಿ ಆಗದ ಕಾರಣ ನಾವು ಯಾವುದೇ ರೀತಿಯ ಬೇಡಿಕೆಯಾದ ನಿಮ್ಮ ನಿರಂತರ 7 ಗಂಟೆ ವಿದ್ಯುತ್ ನೀಡಲಾಗುವುದಿಲ್ಲ ಎಂದು ತಿಳಿಸಿದರು.
ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ ಸರ್ಕಾರ ಆದೇಶ ನೀಡಿರುವ ಸಮಯದಲ್ಲಿ ಏಳು ಗಂಟೆ ವಿದ್ಯುತ್ ನೀಡಬೇಕು ಏಕೆ ನೀಡುತ್ತಿಲ್ಲ ಎಂಬ ಪ್ರಶ್ನೆ ಮಾಡಿದರು. ಹಾಗೂ ಹಗಲು 4 ಗಂಟೆ ರಾತ್ರಿ 3 ಗಂಟೆ ವಿದ್ಯುತ್ ನೀಡುತ್ತಿದ್ದೇವೆ ಎಂದು ಹೇಳುತ್ತೀರಾ ಆದರೆ ಅದನ್ನು ಸರಿಯಾಗಿ ನೀಡುತ್ತಿಲ್ಲ ನಾವು ಬೆಳೆದಿರುವ ಬೆಳೆಗೆ ಯಾವ ಸಮಯದಲ್ಲಿ ನೀರನ್ನು ನೀಡುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಹನೂರು ಘಟಕದ ಅಧ್ಯಕ್ಷರಾದ ಅಮ್ಜದ್ ಖಾನ್ ರವರು ಮಾತನಾಡಿ ಟಿಸಿಗಳ ಅನುದಾನದಲ್ಲಿ ತಾರತಮ್ಯ ಏಕೆ ಹನೂರು ತಾಲೂಕಿಗೆ 50 ಲಕ್ಷ ಅನುದಾನ ಆದರೆ ಕೊಳ್ಳೇಗಾಲ ತಾಲೂಕಿಗೆ 2 ಕೋಟಿ ಯಳಂದೂರು ತಾಲೂಕಿಗೆ 3 ಕೋಟಿ ನೀಡಿ ತಾರತಮ್ಯ ಮಾಡಿದ್ದೀರಾ ಎಂದರು. ವಿದ್ಯುತ್ ಸಮಸ್ಯೆಯ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೀರಾ ಅಥವಾ ಪತ್ರ ಬರೆದಿದ್ದೀರ ಎಂಬ ಪ್ರಶ್ನೆಯನ್ನು ಮಾಡಿದರು. ನಿರಂತರ ಜ್ಯೋತಿಯಲ್ಲಿ ತೋಟದ ಮನೆಗಳಿಗೆ, ಹಾಗೂ ಒಂಟಿ ಮನೆಗಳಿಗೆ ವಿದ್ಯುತ್ತನ್ನು ಏಕೆ ನೀಡುತ್ತಿಲ್ಲ, ಹಲವಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವತಂತ್ರ ಪೂರ್ವ ವೈರ್ ಗಳು ಇವೆ ಅದನ್ನು ಆದಷ್ಟು ಬೇಗ ಬದಲಿಸಬೇಕು ಎಂದು ತಿಳಿಸಿದರು.
ರೈತ ಮುಖಂಡ ಚಂಗಡಿ ಕರಿಯಪ್ಪ ಮಾತನಾಡಿ ಇನ್ನೂ ಹಲವಾರು ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ವಿದ್ಯುತ್ತನ್ನು ಒದಗಿಸಿಲ್ಲ, 70 ವರ್ಷಗಳಾದರೂ ಇನ್ನೂ ಕೆಲವರು ಗ್ರಾಮಗಳಿಗೆ ವಿದ್ಯುತ್ ಇಲ್ಲ ಎಂದು ಪ್ರಶ್ನೆ ಮಾಡಿದರು. ಜಲ್ಲಿ ಪಾಳ್ಯ ಸುತ್ತಮುತ್ತಲಿನ ಗ್ರಾಮಗಳಿಗೆ ವೋಲ್ಟೇಜ್ ಸಮಸ್ಯೆ ಇದೆ ಅದನ್ನು ಆದಷ್ಟು ಬೇಗ ಸರ್ಕಾರದ ಗಮನಕ್ಕೆ ತಂದು ಸರಿಪಡಿಸಿಕೊಡಬೇಕು ಎಂದು ಮನವಿ ಮಾಡಿದರು.
ರೈತ ಮುಖಂಡ ಪ್ರಸಾದ್ ರವರು ಮಾತನಾಡಿ ಅಕ್ರಮ ಸಕ್ರಮದಲ್ಲಿ 2018 -19 ನೇ ಸಾಲಿನಲ್ಲಿ ಟಿಸಿಯನ್ನು ಪಡೆಯಲು ಅರ್ಜಿ ಸಲ್ಲಿಸಿದ್ದು ಅದು ಇನ್ನೂ ಆಗಿಲ್ಲ, ಆದರೆ 2022 ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಟಿಸಿ ನೀಡಲಾಗಿದೆ ಎಂದು ಪ್ರಶ್ನೆ ಮಾಡಿದರು.
ರೈತರ ಸಮಸ್ಯೆಗಳನ್ನು ಆಲಿಸಿದ ಅಧೀಕ್ಷಕ ಇಂಜಿನಿಯರ್ ಸೋಮಶೇಖರ್ ರವರು ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ತಿಳಿಸಿದ್ದಾರೆ.
ಈ ಸಮಯದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ತಬಸ್ಸುಮ್, ಎ ಇ ಇ ಶಂಕರ್, ಎ ಇ ರಂಗಸ್ವಾಮಿ ಚೆಸ್ಕಾಂನ ಸಿಬ್ಬಂದಿ ವರ್ಗದವರು ರೈತ ಮುಖಂಡರು ಹಾಗೂ ರೈತರು ಹಾಜರಿದ್ದರು.