ಅಫಜಲಪುರ : ಶಿಕ್ಷಣ ದೇಶದ ಅಭಿವೃದ್ಧಿಯ ಸಂಕೇತವಾಗಿದ್ದು, ಎಲ್ಲರೂ ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದು ಮಣ್ಣೂರ ಗ್ರಾಮ ಪಂಚಾಯತಿ ಅಧ್ಯಕ್ಷೆ ಆರತಿ ಬಸವರಾಜ ಜನ್ನಾ ಹೇಳಿದರು. ಅವರು ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಮಾದರಿ ಶಾಲೆಯಲ್ಲಿ ಗ್ರಾಮ ಪಂಚಾಯತಿ ಮಣ್ಣೂರ ಹಾಗೂ ಸರ್ಕಾರಿ ಮಾದರಿ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಾಕ್ಷರ ಭಾರತ ಕಾರ್ಯಕ್ರಮ ಅಡಿಯಲ್ಲಿ ಲಿಖನಾ ಪಡನಾ ಅಭಿಯಾನದ ಸ್ವಯಂ ಸೇವಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಕ್ಷರತಾ ಬೋಧಕರ ತರಬೇತುದಾರ ಬಾಬಾಸಾಹೇಬ ಆಲೂರ ಮಾತನಾಡಿ ಅನಕ್ಷರಸ್ಥರನ್ನು ಗುರುತಿಸಿ ಪಾಠ ಹೇಳುವ ಕಾರ್ಯಕ್ಕಾಗಿ ಸಾಕ್ಷರ ಬೋಧಕರನ್ನು ನೇಮಿಸಿ ಕಾರ್ಯಗತಗೊಳಿಸಲಾಗುತ್ತದೆ.ಪುಸ್ತಕಗಳ ಮೂಲಕ ಬೋಧನೆ ಮಾಡಿ ಕನ್ನಡ, ಗಣಿತ, ವಿಷಯಗಳ ಬಗ್ಗೆ ಕಲಿಸಲಾಗುತ್ತದೆ. ಅನಕ್ಷರತೆ ಹೋಗಲಾಡಿಸಿ ಸಾಕ್ಷರರನ್ನಾಗಿ ಮಾಡುವುದು ಈ ಕಾರ್ಯಕ್ರಮದ
ಮುಖ್ಯ, ಉದ್ದೇಶವಾಗಿದೆ. ಸ್ವಯಂಸೇವಕರ ಸಹಾಯದಿಂದ ಎಲ್ಲರಿಗೂ ಕನಿಷ್ಟ ಓದು, ಬರಹ ಹಾಗೂ ಸುಲಭ ಲೆಕ್ಕಗಳನ್ನು ಕಲಿಸಲಾಗುವುದು.ಮನೆಯ ಸುತ್ತಮುತ್ತಲಿನ ಅನಕ್ಷರಸ್ಥರಿಗೆ ಕಲಿಸುವ ಉದ್ದೇಶದಿಂದ ಸಾಕ್ಷರತಾ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ಮುಖಂಡ ಅಪ್ಪಾಸಾಬ ಹೊಸೂರಕರ ಮಾತನಾಡಿ ಅನಕ್ಷರಸ್ಥರಿಗೆ, ಶಿಕ್ಷಣ ಕೊಡುವ ನಿಟ್ಟಿನಲ್ಲಿ ಸರ್ಕಾರ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು ಗ್ರಾಮೀಣ ಜನರು ಸದುಪಯೋಗಪಡಿಸಿಕೊಳ್ಳಬೇಕು. ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಗ್ರಾಮ ಪಂಚಾಯತಿ ವತಿಯಿಂದ ಸಾಕ್ಷರ ಭಾರತ ಕಾರ್ಯಕ್ರಮಕ್ಕೆ ಬೇಕಾಗುವ ಮೂಲ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸ್ವಯಂ ಸೇವಕರಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಮುದಾಯದತ್ತ ಶಾಲೆ ನೋಡಲ್ ಅಧಿಕಾರಿ ದತ್ತಪ್ಪ ಡೊಂಬಾಳೆ, ಮುಖ್ಯ ಗುರು ವಿಶ್ವನಾಥ ರೋಡಗಿ, ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜ ವಾಯಿ, ಗುರಪ್ಪ ಬಿಜಾಪುರ ಶಿವಪ್ಪ ಕರೂಟಿ, ಹಣಮಂತ ನಾವಾಡಿ ಲಾಡ್ಲೇಮಶಾಕ ಗೌರ, ಮುಖಂಡರಾದ ಅಪ್ಪಾಸಾಬ ಹೊಸೂರಕರ, ಮಲಕಣ್ಣ ಹೊಸೂರಕರ, ಬಸವರಾಜ ಜನ್ನಾ, ಶರಣಪ್ಪ ನಾವದಗಿ, ಶರಣು
ತಾರಾಪುರ, ಸಂತೋಷ. ಅಲ್ಲಾಪೂರ, ಸೇರಿದಂತೆ ಶಿಕ್ಷಕ ವೃಂದದವರು ಸ್ವಯಂ ಸೇವಕರಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.