ಬೆಂಗಳೂರು: ಅಕ್ಕನಮನೆ ಪ್ರತಿಷ್ಠಾನ ಬೆಂಗಳೂರು ವತಿಯಿಂದ ಸಾಂಸ್ಕೃತಿಕ ಸಮುಚ್ಚಯ ಕಲಾಗ್ರಾಮ, ಮಲ್ಲತಹಳ್ಳಿ ರಸ್ತೆ, ಜ್ಞಾನ ಭಾರತಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ದೇಸಿದಿಬ್ಬಣ- 2022 ಕಾರ್ಯಕ್ರಮದಲ್ಲಿ ಯುವ ಸಾಹಿತಿ ಡಾ. ಬದರೀನಾಥ ಜಹಗೀರದಾರ ರಚಿಸಿದ “ಗಹನ” ಮತ್ತು “ಸರಿಯಾವುದು ಎಂದಾರಿಸು ಮನವೇ…” ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಅಶೋಕ ಪಟ್ಟಣ ನೆರವೇರಿಸಿ ಮಾತನಾಡಿ ಅಕ್ಕನಮನೆ ಪ್ರತಿಷ್ಠಾನ ಆಯೋಜಿಸಿದ ದೇಸಿ ದಿಬ್ಬಣ ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ದೇಸಿ ಕಲೆ ಮತ್ತು ಕಲಾವಿದರನ್ನು ಒಂದೆಡೆ ಸೇರಿಸಿ ಅವರ ಕಲೆಯನ್ನು ಪ್ರೋತ್ಸಾಹಿಸಿ, ಗೌರವಿಸುವ ಒಂದು ಅಪೂರ್ವ ಕಾರ್ಯಕ್ರಮ ಇದಾಗಿದೆ. ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಕಲಾವಿದರು, ಸಾಹಿತಿಗಳು, ಸಾಹಿತ್ಯಸಕ್ತರು ಈ ಕಾರ್ಯಕ್ರಮದ ಮೇರುಗನ್ನು ಹೆಚ್ಚಿಸಿದ್ದಾರೆ. ಅಲ್ಲದೆ ದೇಸಿ ಸಂಸ್ಕೃತಿಯನ್ನು, ಮಾನವೀಯ ಮೌಲ್ಯಗಳನ್ನು, ಉತ್ತಮ ಸಮಾಜದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಚಿತವಾದ ಯುವ ಸಾಹಿತಿ ಡಾ.ಜಹಗೀರದಾರರ ಕೃತಿಗಳು ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸದ ಸಂಗತಿ. ಹಲವು ಕಲೆಗಳ ಪ್ರದರ್ಶನವೂ ಈ ವೇದಿಕೆಯಲ್ಲಿ ಆಯೋಜಿಸಿರುವುದು ದೇಸಿ ಸಂಸ್ಕೃತಿಯ ಉಳಿವಿಗಾಗಿ ಬಹಳಷ್ಟು ಸಹಕಾರಿಯಾಗಬಲ್ಲದು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀ ರವೀಂದ್ರ ಭಟ್, ಕಾರ್ಯ ನಿರ್ವಾಹಕ ಸಂಪಾದಕರು, ಪ್ರಜಾವಾಣಿ ದಿನಪತ್ರಿಕೆ ಮಾತನಾಡಿ ಸರ್ವರನ್ನು ಒಗ್ಗೂಡಿಸುವ ಮೂಲಕ ವಿಶ್ವಮಾನವ ಸಂದೇಶ ಸಾರುವ ಬರವಣಿಗೆ ನಿರಂತರವಾಗಿ ಪ್ರವಹಿಸುತ್ತಿರಲಿ ಇದು ಮುಂದೊಂದು ದಿನ ಸಾಕಾರಾತ್ಮಕ ಬದಲಾವಣೆ ತರುವಲ್ಲಿ ಸಹಕಾರಿಯಾಗುವುದು. ನಾಡಿನ ತುಂಬೆಲ್ಲ ಸಾಂಸ್ಕೃತಿಕ ಆಂದೋಲನ ನಡೆಯಬೇಕಿದೆ. ಡಾ. ಜಹಗೀರದಾರರ ಕೃತಿಗಳು ಉತ್ತಮ ಆಶಯಗಳನ್ನು ಹೊಂದಿವೆ. ಇವು ಓದುಗರನ್ನು ಚಿಂತನೆಗೆ ಹಚ್ಚುತ್ತದೆ ಅಲ್ಲದೇ ಮನಸ್ಸುಗಳಿಗೆ ಒಂದು ಬಗೆಯ ಪ್ರೇರಣೆ ನೀಡಿ ಆತ್ಮವಿಶ್ವಾಸ ಮೂಡಿಸಬಲ್ಲವು ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಡಾ. ಶಶಿಕಾಂತ ಪಟ್ಟಣ ಮಾತನಾಡಿ ಸಾಹಿತ್ಯ ಸರ್ವಕಾಲಕ್ಕೂ ಸಲ್ಲುವಂಥದ್ದು ಹೀಗಾಗಿ ಮನಸ್ಸು ಮನಸ್ಸುಗಳಲ್ಲಿ ಆತ್ಮೀಯತೆ, ಸ್ನೇಹ-ಸಂಬಂಧಗಳನ್ನು, ಮಾನವೀಯ ಮೌಲ್ಯಗಳನ್ನು ಘಟ್ಟಿಗೊಳಿಸುವ ಬರವಣಿಗೆಗಳು ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಯುವ ಸಾಹಿತಿ ಡಾ. ಜಹಗೀರದಾರರ ಕೃತಿಗಳಲ್ಲಿ ಆದರ್ಶಮಾಯವಾದ ಸಮಾಜ ನಿರ್ಮಾಣದ ಕನಸೊತ್ತ ಬರವಣಿಗೆ ನಿಜಕ್ಕೂ ಓದುಗರಿಗೆ ಅದರಲ್ಲೂ ಯುವಕರಿಗೆ ಪ್ರೇರಣೆ ನೀಡಬಲ್ಲವು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎಸ್. ಜಿ. ಸಿದ್ದರಾಮಯ್ಯ ವಹಿಸಿ ಮಾತನಾಡಿ ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಕಾರ್ಯ ನಡೆಯಲಿ. ಒಂದು ವಿಶೇಷವಾದ ಕಾರ್ಯಕ್ರಮ ಇದರ ಮೂಲಕ ನಾಡಿನ ಪ್ರತಿಭೆಗಳ ಕಲೆ, ಸಾಹಿತ್ಯ ಅನಾವರಣಗೊಂಡಿದೆ. ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿರುವುದು ಕಾರ್ಯಕ್ರಮದ ಯಶಸ್ಸಿಗೆ ಮೂಲ ಕಾರಣವಾಗಿದೆ. ಡಾ. ಜಹಗೀರದಾರರ 2 ಕೃತಿಗಳು ಲೋಕಾರ್ಪಣೆಗೊಂಡಿರುವುದು ಕಾರ್ಯಕ್ರಮದ ವಿಶೇಷತೆಯನ್ನು ಹೆಚ್ಚಿಸಿದೆ. ಅವರ ಸಾಹಿತ್ಯ ಕೃಷಿ ಮತ್ತಷ್ಟು ವೃದ್ಧಿಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಅಕ್ಕನಮನೆ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಮತಿ ಸಿ. ಸಿ. ಹೇಮಲತಾ, ಕಾರ್ಯದರ್ಶಿಗಳು, ನಿರ್ದೇಶಕರು, ಅತಿಥಿಗಳಾಗಿ ಹಿರಿಯ ಶ್ರೀ ಸುಶೀಲಮ್ಮ, ಸಂಸ್ಥಾಪಕರು ಸುಮಂಗಲಿ ಸೇವಾಶ್ರಮ ಹೆಬ್ಬಾಳ, ಶ್ರೀ ಕನ್ನಡವೇ ಸತ್ಯ ರಂಗಣ್ಣ ಸಮಾಜ ಸೇವಕರು, ಹಿರಿಯ ಸಂಗೀತಗಾರರು ಶ್ರೀ ಶಶಿಧರ ಕೋಟೆ, ಡಾ. ರಾಜು ಮೂಡಲಪಾಳ್ಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾಹಿತಿಗಳು, ಸಾಹಿತ್ಯಸಕ್ತರು ಕಲಾವಿದರು ಉಪಸ್ಥಿತರಿದ್ದರು.