ತಿಳುವಳಿಕೆ ಜ್ಞಾಪನ ಪತ್ರಕ್ಕೆ ಸಹಿ ಹಾಕಿದ ಡಿ.ಪಿ.ಆರ್ ಮತ್ತು ದಾಸೋಹಿ ಎಫ್.ಪಿ.ಓ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ :ಕೃಷಿ ಸುಸ್ಥಿರತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗ್ರಾಮೀಣ ಕೋಳಿ ಸಾಕಾಣಿಕೆಯ ಜೊತೆ ವಾಣಿಜ್ಯ ಕೋಳಿ ಉದ್ಯಮಗಳ ಉತ್ತೇಜನವನ್ನು ಗುರಿಯಾಗಿಸಿಕೊಂಡು ಹೈದರಾಬಾದಿನಲ್ಲಿರುವ ದೇಶದ ಪ್ರತಿಷ್ಠಿತ ಐ.ಸಿ.ಎ.ಆರ್ ಕುಕ್ಕುಟ ಸೋಶೋಧನಾ ನಿರ್ದೇಶನಾಲಯ ಮತ್ತು ಸ್ಥಳೀಯ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಗಳೆರೆಡು ಸೇರಿ ಭವಿಷ್ಯದ ಅಗತ್ಯತೆಗಳನ್ನು ಪೂರೈಸಲು ಜಂಟಿ ಸಹಭಾಗಿತ್ವದಲ್ಲಿ ಒಟ್ಟಾಗಿ ಕೆಲಸ ಮಾಡುವ ಸಂಬಂದ ಪರಸ್ಪರ ತಿಳುವಳಿಕೆಯ ಜ್ಞಾಪನ ಪತ್ರಕ್ಕೆ ಸಹಿ ಹಾಕಿವೆ.
ಹೈದರಾಬಾದಿನ ಐ.ಸಿ.ಎ.ಆರ್ ಕುಕ್ಕುಟ ಸಂಶೋಧನಾ ನಿರ್ದೇಶನಾಲಯದ ಪ್ರೇಕ್ಷಾ ಗೃಹದಲ್ಲಿ ಆಯೋಜಿಸಲಾಗಿದ್ದ ಸಹಿ ಹಾಕುವ ಸಮಾರಂಭದಲ್ಲಿ ಡಿ.ಪಿ.ಆರ್ ನಿರ್ದೇಶಕ ಡಾ. ಆರ್.ಎನ್ ಚಟರ್ಜಿ ಮತ್ತು ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಅರವಿಂದ ಹು. ಕೊಪ್ಪ ಇವರುಗಳು ಪರಸ್ಪರ ಸಹಿ ಹಾಕಿ ಅಧಿಕೃತವಾಗಿ ಸ್ವೀಕರಿಸಿದರು.
ಈ ಮೊದಲು ಐ.ಸಿ.ಎ.ಆರ್ ಕುಕ್ಕುಟ ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ. ಆರ್.ಎನ್ ಚಟರ್ಜಿ ಇವರ ಅಧ್ಯಕ್ಷತೆಯಲ್ಲಿ ಪರಸ್ಪರರಲ್ಲಿ ಮಾಡಿಕೊಳ್ಳಬಹುದಾದ ಒಡಂಬಂಡಿಕೆಗಳ ಕುರಿತಾಗಿ ನಡೆದ ಸಭೆಯಲ್ಲಿ ಗ್ರಾಮೀಣ ಕೋಳಿ ಸಾಕಾಣಿಕೆ ಪ್ರದೇಶ ವಿಸ್ತರಣೆ ಮತ್ತು ವಾಣಿಜ್ಯ ಕುಕ್ಕಟೋದ್ಯಮಕ್ಕೆ ಬೇಕಾದ ಸುಧಾರಿತ ತಳಿಗಳ ಪೂರೈಕೆೆ, ಸಲಕರಣೆ ಮತ್ತು ಯಂತ್ರಗಳಿಗೆ ಸಂಬಂದಿತ ತಾಂತ್ರಿಕತೆಗಳ ವಿನಿಮಯ, ವೈಜ್ಞಾನಿಕ ತರಬೇತಿ, ಮರಿ ಉತ್ಪಾದನಾ ಘಟಕ ಸ್ಥಾಪನೆ ಮತ್ತು ನಿರ್ವಹಣೆಗೆ ಬೇಕಾದ ತಾಂತ್ರಿಕ ಮಾರ್ಗದರ್ಶನ, ಕೋಳಿ ಆಹಾರ ಉತ್ಪಾದನಾ ಘಟಕ ಸ್ಥಾಪನೆಗೆ ತಾಂತ್ರಿಕ ಸಲಹೆ ಮತ್ತು ನಿರ್ವಹಣೆ, ಪ್ರಾದೇಶಿಕ ಅಗತ್ಯತೆಗೆ ಪೂರಕವಾದ ಸಂಶೋಧನೆಗಳನ್ನು ಕೈಗೊಳ್ಳುವುದು ಸೇರಿದಂತೆ ಎಫ್.ಪಿ.ಓ ಮತ್ತು ಡಿ.ಪಿ.ಆರ್‌ಗೆ ಸಹಕಾರಿಯಾಗಬಹುದಾದ ಯೋಜನೆ, ತಂತ್ರಗಾರಿಕೆ ಹಾಗೂ ಸಾಧ್ಯತೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ ನಂತರದಲ್ಲಿ ತಿಳುವಳಿಕೆ ಜ್ಞಾಪನ ಪತ್ರ ಮಾಡಿಕೊಳ್ಳುವ ಮೂಲಕ ಜಂಟಿ ಕಾರ್ಯಯೋಜನೆಗಳ ಗುರಿ ಸಾಧನೆಯ ಬಗ್ಗೆ ನಿರ್ಧರಿಸಿ ಒಡಬಂಡಿಕೆ ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು.
ತಿಳುವಳಿಕೆ ಜ್ಞಾಪನ ಪತ್ರದಲ್ಲಿ ತಿಳಿಸಿದಂತೆ, ಗ್ರಾಮೀಣ ಮತ್ತು ವಾಣಿಜ್ಯ ಕೋಳಿ ಉದ್ಯಮ ನಡೆಸುವ ರೈತರಿಗೆ ಸೂಕ್ತ ಪ್ರೋತ್ಸಾಹ ನೀಡುವುದರ ಮೂಲಕ ರಾಜ್ಯದಲ್ಲಿ ಕೋಳಿ ಸಾಕಾಣಿಕೆ ಪ್ರದೇಶ ವಿಸ್ತರಣೆ ಮತ್ತು ಉತ್ಪಾದನೆಗೆ ಒತ್ತು ನೀಡುವುದು. ಪೌಷ್ಠಿಕ ಆಹಾರ ಪೂರೈಕೆ ಸರಪಳಿಯನ್ನು ಸುಸ್ಥಿರಗೊಳಿಸುವುದು, ರೈತರಿಗೆ ಆರ್ಥಿಕ ಭದ್ರತೆ ನೀಡುವ ಕೋಳಿ ಸಾಕಾಣಿಕೆಯನ್ನು ಉತ್ತೇಜಿಸಲು ಜನಾಂದೋಲನ ರೂಪಿಸುವುದು. ಕೋಳಿ ಸಾಕಾಣಿಕೆಗೆ ಪೂರಕವಾದ ಸುಧಾರಿತ ತಾಂತ್ರಿಕತೆಗಳನ್ನು ಸೂಕ್ತ ಸಮಯದಲ್ಲಿ ಅಳವಡಿಸಿ ರೈತರ ಆರ್ಥಿಕ ನಷ್ಟ ತಡೆಯುವುದು. ಫೌಲ್ಟಿç ಉತ್ಪನ್ನಗಳ ಸಂಸ್ಕರಣೆ, ವಾಣಿಜ್ಯೀಕರಣಕ್ಕೆ ಪ್ರೋತ್ಸಾಹಿಸಿ ಪೌಷ್ಠಿಕಭರಿತ ಮೊಟ್ಟೆ ಮತ್ತು ಮಾಂಸಗಳನ್ನು ಪರಿಚಯಿಸುವುದು. ಕೋಳಿ ಮೊಟ್ಟೆ ಮತ್ತು ಮಾಂಸದ ಬಗ್ಗೆ ಜಾಗೃತಿ ಮೂಡಿಸಿ ಮಾರುಕಟ್ಟೆ ಸಂಪರ್ಕ ಹೆಚ್ಚಿಸಿ ಆಹಾರದ ಮುಖ್ಯವಾಹಿನಿಗೆ ತರುವುದು. ಸಂಸ್ಕರಣೆ, ಮೌಲ್ಯವರ್ಧನೆ ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಇತ್ಯಾದಿ ವಿಷಯಗಳ ಬಗ್ಗೆ ಅನುಷ್ಠಾನ ಬದ್ಧತೆಯೊಂದಿಗೆ ಕಾರ್ಯಾಚರಣೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಗ್ರಾಮೀಣ ಕೋಳಿ ಸಾಕಾಣಿಕೆಯನ್ನು ಮರುಸ್ಥಾಪಿಸುವ ಬಗ್ಗೆ ವಿನಿಮಯ ಆಧಾರದಲ್ಲಿ ಪರಸ್ಪರ ಒಪ್ಪಿಗೆ ಸೂಚಿಸಲಾಗಿದೆ.
ಐ.ಸಿ.ಎ.ಆರ್ ಕುಕ್ಕುಟ ಸಂಶೋಧನಾ ನಿರ್ದೇಶನಾಲಯವು ಕರ್ನಾಟಕ ರಾಜ್ಯದಲ್ಲಿ ತನ್ಮೂಲಕ ತರಬೇತಿ, ಗುತ್ತಿಗೆ ಆಧರಿತ ಸಂಶೋಧನೆ, ಮಾರ್ಗದರ್ಶನ, ತಾಂತ್ರಿಕತೆಗಳ ವಿನಿಮಯ, ಸೇವೆ ಸೇರಿದಂತೆ ಕುಕ್ಕುಟೋದ್ಯಮದ ಬೆಳವಣಿಗೆಗೆ ಪೂರಕವಾದ ವೃತ್ತಿಪರ ಯೋಜನೆಗಳ ಅನುಷ್ಠಾನಕ್ಕೆ ಒಡಂಬಡಿಕೆ ಮಾಡಿಕೊಂಡು ತಿಳುವಳಿಕೆ ಜ್ಞಾಪನ ಪತ್ರಕ್ಕೆ ಸಹಿ ಹಾಕಿರುವುದು ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯು ಎರಡನೆಯ ಸಂಸ್ಥೆ ಎಂಬ ಕೀರ್ತಿಗೆ ಭಾಜವಾಗಿದೆ.
ಈ ಸಂದರ್ಭದಲ್ಲಿ ಕುಕ್ಕುಟ ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿ ಡಾ. ಎಂ. ಆರ್ ರೆಡ್ಡಿ, ಹಿರಿಯ ವಿಜ್ಞಾನಿ ಡಾ. ವಿಜಯಕುಮಾರ, ಡಾ.ಸಾಯಿಕಾಂತ ದಮಾ, ಕಂಪನಿ ಕಾನೂನು ತಜ್ಞ ಸಬಜೀತ ಶಹಾ, ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ಬಿ.ಜಿ ಮಠ, ಆರ್.ಬಿ ಸಜ್ಜನ, ಆನಂದ ದೇಸಾಯಿ ಉಪಸ್ಥಿತರಿದ್ದರು.