ಸಂಸ್ಕೃತ ಭಾಷೆಯನ್ನು ನಿರ್ಲಕ್ಷಿಸಬಾರದು: ಶರತ್ ಚಂದ್ರ ಸ್ವಾಮೀಜಿ
ಹನೂರು: ನಮ್ಮ ಮೂಲ ಭಾಷೆ ಸಂಸ್ಕೃತವಾಗಿದ್ದು, ಸಂಸ್ಕೃತ ಸಂಸ್ಕಾರವನ್ನು ಕಲಿಸುವುದರ ಜೊತೆಗೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತದೆ ಎಂದು ಕುಂದೂರು ಮಠದ ಶರತ್‌ಚಂದ್ರ ಸ್ವಾಮೀಜಿ ತಿಳಿಸಿದರು.
ಶ್ರೀ ಮಲೆಮಹದೇಶ್ವರ ಸ್ವಾಮಿ ಕೃಪಾ ಎಜ್ಯುಕೇಷನ್ ಸೊಸೈಟಿ ಹಾಗೂ ಚಾಮರಾಜನಗರ ಜಿಲ್ಲಾ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ವತಿಯಿಂದ ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ಏರ್ಪಡಿಸಿದ್ದ ಸಂಸ್ಕೃತೋತ್ಸವ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮಾಯಾಣ, ಮಹಾಭಾರತವನ್ನು ಮಹಾಗ್ರಂಥವನ್ನು ಪರಿಪೂರ್ಣವಾಗಿ ಅರ್ಥೈಸಿಕೊಳ್ಳಬೇಕಾದರೆ ಸಂಸ್ಕೃತ ಭಾಷೆ ಮುಖ್ಯ. ಆದರೆ ಬಹುತೇಕ ಜನರು ಸಂಸ್ಕೃತ ಭಾಷಾ ಕಲಿಕೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದ ಮಹಾಗ್ರಂಥಗಳನ್ನು ಇನ್ನು ಸಹ ಸರಿಯಾಗಿ ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಆದ್ದರಿಂದ ಸಂಸ್ಕೃತ ಕಲಿಕೆಗೆ ಒತ್ತು ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಮಾಯಣ, ಮಹಾಭಾರತ ಗ್ರಂಥಗಳ ಸಾಹಿತ್ಯ ನಶಿಸುವ ಮಟ್ಟಕ್ಕೆ ತಲುಪುತ್ತದೆ. ಈ ದಿಸೆಯಲ್ಲಿ ಸಂಸ್ಕೃತವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಾಲೂರು ಮಠದ ವತಿಯಿಂದ ಸಂಸ್ಕೃತ ಪಾಠಶಾಲೆಯನ್ನು ತೆರೆದು ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದಲೂ ಸಹಕಾರ ನೀಡುತ್ತಿದೆ ಎಂದು ತಿಳಿಸಿದರು.
ಸಾಲೂರು ಮಠದ ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮಠ ಮಾನ್ಯಗಳು ಸ್ಥಾಪನೆಯಾದ ಬಳಿಕ ಸಂಸ್ಕೃತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ ಪರಿಣಾಮ ಸಾಕ್ಷರತೆ ಪ್ರಮಾಣ ಗಣನೀಯವಾಗಿ ಏರಿಕೆಯಾಯಿತು. ಈ ಹಿಂದೆ ಮಕ್ಕಳನ್ನು ಮಠಗಳಿಗೆ ಸೇರಿಸಿಕೊಳ್ಳುವ ಮೊದಲು ಮಕ್ಕಳನ್ನು ಸಂಸ್ಕೃತ ಪಾಠಶಾಲೆಗಳಿಗೆ ದಾಖಲು ಮಾಡಿಕೊಂಡು ಸಂಸ್ಕಾರವನ್ನು ಕಲಿಸಲಾಗುತ್ತಿತ್ತು. ಹಾಗಾಗಿ ಸಂಸ್ಕೃತ ಕಲಿಕೆ ಮುಖ್ಯವಾದುದು ಎಂದು ತಿಳಿಸಿದರು.
ವಿಷಯ ಪರಿವೀಕ್ಷಕ ಮಲ್ಲಣ್ಣ ಮಾತನಾಡಿ, ಸಂಸ್ಕೃತ ಎಲ್ಲಾ ಭಾಷೆಗಿಂತಲೂ ಪ್ರೌಢಿಮೆಯನ್ನು ಹೊಂದಿದೆ. ಆದ್ದರಿಂದ ಸಂಸ್ಕೃತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್ ಅಹಲ್ಯಾ, ಸಹಾಯಕ ಕುಲಸಚಿವ ಶಿವಮೂರ್ತಿ, ಬೆಂಗಳೂರು ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಪ್ರಾಧ್ಯಾಪಕ ಸಿ.ಪಾಲಯ್ಯ, ವಲಯ ಸಂಯೋಜಕ ಇಂದ್ರೇಶಪ್ಪ, ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಬೇಡಗಂಪಣ ಸಮಾಜದ ಅಧ್ಯಕ್ಷ ಪುಟ್ಟಣ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ..