ಹಿರೇರೂಗಿ: ಕನ್ನಡ ರಥಯಾತ್ರೆಯ ಅದ್ದೂರಿ ಮೆರವಣಿಗೆ
ಇಂಡಿ: ಕನ್ನಡವೇ ಸತ್ಯ-ಕನ್ನಡವೇ ನಿತ್ಯ, ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎಂಬ ಮುಂತಾದ ಕನ್ನಡ ಜಯಘೋಷಗಳೊಂದಿಗೆ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕನ್ನಡದ ಮನಸ್ಸುಗಳು ಕನ್ನಡ ರಥಯಾತ್ರೆಯನ್ನು ಭವ್ಯವಾಗಿ ಸ್ವಾಗತಿಸಿದವು.
ರವಿವಾರ ಸಂಜೆ ಗ್ರಾಮದಲ್ಲಿ ತಾಲ್ಲೂಕು ಆಡಳಿತ ವರ್ಗ,ಗ್ರಾಮ ಪಂಚಾಯಿತಿ, ಹಿರೇರೂಗಿ ಕ್ಲಸ್ಟರ್ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಿ,ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಮೆರವಣಿಗೆ ಮಾಡಲಾಯಿತು. ವಿವಿಧ ಮಹನೀಯರ ವೇಷಭೂಷಣ ತೊಟ್ಟ ಶಾಲಾ ಮಕ್ಕಳು, ಕುಂಭ-ಕಳಸ-ಆರತಿ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಕರಡಿ ಮಜಲು, ಮಹಿಳೆಯರ ಕೋಲಾಟ ಮೆರವಣಿಗೆಯ ವಿಶೇಷವಾಗಿತ್ತು. ಕನ್ನಡ ಭಾವುಟ ಹಾರಾಡಿಸುತ್ತಾ ಕನ್ನಡಾಭಿಮಾನಿಗಳು ಕುಣಿದು ಕುಪ್ಪಳಿಸುತ್ತಾ, ರಸ್ತೆಯುದ್ಧಕ್ಕೂ ಕನ್ನಡ ಪರ ಘೋಷಣೆಗಳನ್ನು ಮೊಳಗಿಸಿದರು.
ತಾಲೂಕ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಾಬು ರಾಠೋಡ ಮಾತನಾಡಿ,ಕರ್ನಾಟಕ ಸಂಭ್ರಮ-೫೦ ರ ನಿಮಿತ್ತ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಅರಿವು ಇಂದಿನ ಜನತೆಯಲ್ಲಿ ಮೂಡಿಸುವ
ಉದ್ದೇಶದೊಂದಿಗೆ ಈ ರಥಯಾತ್ರೆ ಆರಂಭಿಸಲಾಗಿದೆ ಎಂದು ಹೇಳಿದರು. ಹಿರೇರೂಗಿ ಪಿಡಿಓ ಬಸವರಾಜ ಬಬಲಾದ ಮಾತನಾಡಿ, ಕನ್ನಡ ನಾಡು ಕಟ್ಟಿ ಬೆಳೆಸಿದ ಮಹನೀಯರನ್ನು ಇಂದಿನ ಪೀಳಿಗೆ ಸ್ಮರಿಸಬೇಕು.ಕನ್ನಡ ನಾಡು ಭವ್ಯ ಇತಿಹಾಸ ಹೊಂದಿದೆ ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಕನ್ನಡ ತಾಯಿ ಭುವನೇಶ್ವರಿಯ ಪೂರ್ಣ ಕೃಪೆ ಸಮಸ್ತ ಕನ್ನಡಿಗರ ಮೇಲಿದೆ. ಕನ್ನಡ ನಮ್ಮ ಜೀವದ ಭಾಷೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಸಂಕಲ್ಪ ಪ್ರತಿಯೊಬ್ಬರೂ ಮಾಡೋಣ ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡಗಡ್ಡಿ, ಕಂದಾಯ ನಿರೀಕ್ಷಕ ಎಚ್ ಎಸ್ ಗುನ್ನಾಪುರ,ಗ್ರಾಮ ಆಡಳಿತಾಧಿಕಾರಿ ಶ್ರೀಶೈಲ ಹಂಚಿನಾಳ,ಯುವ ಮುಖಂಡರಾದ ಪರಶುರಾಮ ಹೊಸಮನಿ, ಸಂತೋಷ ಕೋಟಗೊಂಡ, ಹಿರೇರೂಗಿ ಸಿ ಆರ್ ಪಿ ಸಂತೋಷ ಚವ್ಹಾಣ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಾಳಪ್ಪ ಪೂಜಾರಿ, ಸುದರ್ಶನ ಬೇನೂರ, ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ವಿ ವೈ ಪತ್ತಾರ, ಎ ಎಂ ಬೆದ್ರೇಕರ, ಎಸ್ ಎಲ್ ಪವಾರ, ಶಿಕ್ಷಕರಾದ ಎಸ್ ಆರ್ ಚಾಳೇಕರ,ಎಸ್ ಎಸ್ ಅರಬ,ಎಸ್ ಡಿ ಬಿರಾದಾರ ಸೇರಿದಂತೆ ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ಸಿಬ್ಬಂದಿ ವರ್ಗ, ಗ್ರಾಮಸ್ಥರು, ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.