ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ
ಏನಿದು ಕೋಟಾ ಕಾಯ್ದೆ..?
ವಿಜಯಪುರ, ಮೇ.08 : ಜಿಲ್ಲಾದ್ಯಾಂತ ಇರುವ ಶಾಲಾ-ಕಾಲೇಜ್ ಆವರಣದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನಗಳ ಮಾರಾಟವಾಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ ನೀಡಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 2025-26ನೇ ಸಾಲಿನ ತಂಬಾಕು ನಿಯಂತ್ರಣ ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಶಾಲಾ-ಕಾಲೇಜ್‍ನಲ್ಲಿ ತಂಬಾಕು ನಿಯಂತ್ರಣ ಸಮಿತಿ ರಚಿಸಿ ನಿಯಮಗಳನ್ವಯ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ತಂಬಾಕು ಉತ್ಪನ್ನಗಳ ಉಪಯೋಗದಿಂದ ದುಷ್ಪರಿಣಾಮ ಹಾಗೂ ಕಾಯ್ದೆಯ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ನಿಯಂತ್ರಣಕ್ಕೆ ತನಿಖಾ ದಳಗಳನ್ನು ರಚಿಸಿಕೊಂಡು ಕ್ರೀಯಾಶೀಲತೆಯಿಂದ ಕಾಲ ಕಾಲಕ್ಕೆ ದಾಳಿ ನಡೆಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸೂಕ್ತ ತಿಳುವಳಿಕೆ, ಅರಿವು ಮೂಡಿಸುವಂತೆ ತಿಳಿಸಿದ ಅವರು, ಶಾಲಾ ಶಿಕ್ಷಣ ಸಂಸ್ಥೆಗಳು ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಯ ಮಾರ್ಗಸೂಚಿಗಳನ್ನು ದಾಖಲಿಸಬೇಕು. ಟೂ ಫಿಯಟ್ ತಂತ್ರಾಂಶದಲ್ಲಿ 3325ರ ಶಿಕ್ಷಣ ಸಂಸ್ಥೆಗಳ ಪೈಕಿ 1353 ದಾಖಲಾಗಿದ್ದು, ಬಾಕಿ ಇರುವ 1972 ಸಂಸ್ಥೆಗಳ ಹಾಗೂ 253 ಪದವಿಪೂರ್ವ ಶಿಕ್ಷಣ ಇಲಾಖೆ ಸಂಸ್ಥೆಗಳ ಬಾಕಿ ಇರುವ 50 ಸಂಸ್ಥೆಗಳ ದಾಖಲೀಕರಣಕ್ಕೆ ಅವರು ಸೂಚನೆ ನೀಡಿದರು.
ತಾಲೂಕುಗಳಲ್ಲಿ ಪ್ರತಿ ತಿಂಗಳು ಕಡ್ಡಾಯವಾಗಿ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ ದಾಳಿ ಕೈಗೊಳ್ಳಬೇಕು. ತಾಲೂಕಾ ತನಿಖಾ ತಂಡ ನಿಯಮಿತವಾಗಿ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆ ನಡೆಸಬೇಕು. ಅಬಕಾರಿ ಇಲಾಖೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶಕ್ಕೆ ಅಗತ್ಯ ಸಹಕಾರ ಒದಗಿಸಬೇಕು. ಮೇ.31ರ ವಿಶ್ವ ತಂಬಾಕು ರಹಿತ ದಿನ ಆಚರಣೆ ಅಂಗವಾಗಿ ಎಲ್ಲ ತಾಲೂಕಾ ಕೇಂದ್ರ, ಪ್ರಾಥಮಿಕ-ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಅರಿವು-ಜಾಗೃತಿ ಮೂಡಿಸುವುದರೊಂದಿಗೆ ಕಾಯ್ದೆ ಉಲ್ಲಂಘಿಸಿದ ಪ್ರಕರಣಗಳನ್ನು ಪತ್ತೆ ಹಚ್ಚುವಂತಗೆ ಅವರು ಸೂಚನೆ ನೀಡಿದರು.
ಮಾರ್ಗಸೂಚಿಯನ್ವಯ ಗ್ರಾಮೀಣ ಪ್ರದೇಶಗಳಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ಕೋಟ್ಪಾ-2003ರ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ತಂಬಾಕು ಸೇವನೆ ತ್ಯಜಿಸಲು ಅಗತ್ಯ ಆರೋಗ್ಯ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆ (ಕೌನ್ಸೆಲಿಂಗ್) ನಡೆಸಿ, ತಂಬಾಕು ತ್ಯಜಿಸಲು ಪ್ರೇರೆಪಿಸಬೇಕು, ಯುವ ಸಮುದಾಯದಲ್ಲಿ ಅರಿವು ಮೂಡಿಸಬೇಕು. ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಸೂಚನೆಯ ಮಾರ್ಗಸೂಚಿಯಂತೆ ಪ್ರತಿ ಗ್ರಾಮಗಳಲ್ಲಿ ಹಮ್ಮಿಕೊಳ್ಳುವಂತೆ ತಿಳಿಸಿದ ಅವರು, ಗ್ರಾಮ ಮಟ್ಟದಲ್ಲಿ ಸಮನ್ವಯ ಸಮಿತಿಯನ್ನು ರಚಿಸಿಕೊಳ್ಳಲು ಪತ್ರ ಬರೆಯುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಗ್ರಾಮ ಮಟ್ಟದಲ್ಲಿ ಪಂಚಾಯತಿ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಸದಸ್ಯರು, ಶಾಲಾ ಶಿಕ್ಷಕರು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘ, ಯುವಕ ಸಂಘದ ಅಧ್ಯಕ್ಷರು, ಪ್ರತಿನಿಧಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳನ್ನೊಳಗೊಂಡ ಗ್ರಾಮ ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಿಕೊಂಡು ತಂಬಾಕು ಸೇವೆನಯಿಂದಾಗುವ ದುಷ್ಪರಿಣಾಮಗಳ ಹಾಗೂ ಲಭ್ಯವಿರುವ ಆರೋಗ್ಯ ಮಾಹಿತಿ ಒದಗಿಸುವುದು, ಗ್ರಾಮ ಸಭೆಗಳನ್ನು ಆಯೋಜಿಸಿ ಜಾಗೃತಿ ಮೂಡಿಸುವುದು, ಕೊಟ್ಪಾ-2003ರ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಶಿವಾನಂದ ಮಾಸ್ತಿಹೊಳಿ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಅಶೋಕ ಘೊಣಸಗಿ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ್ ಸೌದಾಗರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಪತ್ರಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಅಪ್ಪಾಸಾಹೇಬ ಇನಾಂದಾರ, ಬಸವನಬಾಗೇವಾಡಿ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಕವಿತಾ ಉಪಸ್ಥಿತರಿದ್ದರು.