ಗೃಹಬಳಕೆ ಸಿಲಿಂಡರ್ ಅಕ್ರಮ ತಡೆಗಟ್ಟುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ
ವಿಜಯಪುರ, ಸೆಪ್ಟೆಂಬರ್ 19: ನಗರದ ವಿವಿಧೆಡೆ ಗೃಹಬಳಕೆ ಸಿಲಿಂಡರ್ ಗ್ಯಾಸ್ ಅಕ್ರಮವಾಗಿ ಮಾರಾಟವಾಗುತ್ತಿರುವುದು ಕಂಡು ಬಂದಿದ್ದು, ಇಂತಹ ಸ್ಥಳಗಳನ್ನು ಗುರುತಿಸಿ, ದಾಳಿ ನಡೆಸಿ ಅಕ್ರಮ ಸಿಲಿಂಡರ್ ಗ್ಯಾಸ್ ಮಾರಾಟ ಮಾಡುವುದನ್ನು ತಡೆಗಟ್ಟುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಆಹಾರ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಅವ್ಯಾಹತವಾಗಿ ನಗರದ ವಿವಿಧೆಡೆ ಅಕ್ರಮವಾಗಿ ಗೃಹ ಬಳಕೆಯ ಸಿಲಿಂಡರ್‍ಗಳನ್ನು ಪಡೆದು, ರಿಫಿಲಿಂಗ್ ಮಾಡಲಾಗುತ್ತಿದೆ. ಇಂತಹ ರಿಫಿಲಿಂಗ್ ಸ್ಥಳಗಳನ್ನು ಪತ್ತೆ ಹಚ್ಚಿ, ವಿವಿಧ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಿಕೊಂಡು ಸೂಕ್ತ ಯೋಜನೆ ರೂಪಿಸಿಕೊಂಡು ಇಂತಹ ಸ್ಥಳಗಳ ಮೇಲೆ ದಾಳಿ ನಡೆಸಿ, ಸಿಲಿಂಡರ್‍ಗಳನ್ನು ವಶಪಡಿಸಿಕೊಂಡು ಕ್ರಮ ಜರುಗಿಸಬೇಕು. ಗ್ಯಾಸ್ ತುಂಬುವವರಿಗೆ ಸಿಲಿಂಡರ್ ಸರಬರಾಜಾಗುತ್ತಿರುವ ಮೂಲವನ್ನು ಪತ್ತೆ ಹಚ್ಚಿ, ಅಕ್ರಮವಾಗಿ ಸಿಲಿಂಡರ್‍ಗಳನ್ನು ಸರಬರಾಜು ಮಾಡುತ್ತಿರುವವರ ಮೇಲೆ ಸೂಕ್ತ ನಿಗಾ ಇಡಬೇಕು. ಅಕ್ರಮ ಸಿಲಿಂಡರ್‍ಗಳು ಪತ್ತೆಯಾದಲ್ಲಿ ಸಂಬಂಧಿಸಿದ ಏಜೆನ್ಸಿಗಳ ಮೇಲೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಕಾನೂನಾತ್ಮಕವಾಗಿ ಎಲ್‍ಪಿಜಿ ಕನೆಕ್ಷನ್ ಪಡೆದುಕೊಂಡ ಆಟೋರಿಕ್ಷಾ ಸೇರಿದಂತೆ ಇತರೆ ವಾಹನಗಳಿಗೆ ಗೃಹ ಬಳಕೆ ಸಿಲಿಂಡರ್‍ನಿಂದ ಅಕ್ರಮವಾಗಿ ರಿಫಿಲಿಂಗ್ ವಿವಿಧೆಡೆ ಮಾಡಲಾಗುತ್ತಿದೆ. ಇಂತಹ ಸ್ಥಳಗಳನ್ನು ಪತ್ತೆ ಹಚ್ಚಿ, ದಾಳಿ ನಡೆಸಿ, ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡು ಸಂಬಂಧಿಸಿದವರ ಮೇಲೆ ಕ್ರಮವಹಿಸಬೇಕು. ಅಕ್ರಮವಾಗಿ ಗೃಹಬಳಕೆಯ ಗ್ಯಾಸ್‍ನ್ನು ತುಂಬಿಸುವ ವಾಹನಗಳನ್ನು ತಪಾಸಣೆ ನಡೆಸಿ, ಪ್ರಕರಣ ದಾಖಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಿಲಿಂಡರ್ ರಿಫೀಲಿಂಗ್ ಮಾಡುವವರ ಮೇಲೆ ಕ್ರಮ ವಹಿಸಿ ಸಿಲಿಂಡರ್‍ಗಳನ್ನು ವಶಕ್ಕೆ ಪಡೆದುಕೊಳ್ಳಬೇಕು. ಇಂತಹ ಕೇಂದ್ರಗಳನ್ನು ಸೀಜ್ ಮಾಡುವಂತೆ ಪಾಲಿಕೆ ಆಯುಕ್ತರಿಗೆ ಅವರು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ ಸೋನಾವಣೆ ಅವರು ಮಾತನಾಡಿ, ಅಕ್ರಮವಾಗಿ ಸಿಲಿಂಡರ್ ಬಳಕೆ ಮಾಡುತ್ತಿರುವ ಸ್ಥಳಗಳಿಗೆ ಪೊಲೀಸ್‍ರೊಂದಿಗೆ ನಿಯಮಿತವಾಗಿ ದಾಳಿ ನಡೆಸಿ, ಸಂಬಂಧಿಸಿದವರ ಮೇಲೆ ಪ್ರಕರಣ ದಾಖಲಿಸುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಆಹಾರ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮಬಾಬಾ ಮುದ್ದೇಬಿಹಾಳ, ವಿಜಯಪುರ ತಹಶೀಲ್ದಾರ ಪ್ರಕಾಶ ಚನಗೊಂಡ, ಸೇರಿದಂತೆ ಇತರರು ಉಪಸ್ಥಿತರಿದ್ದರು.