ಇಂಡಿಯಲ್ಲಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರ ವಿತರಣೆ
ಇಂಡಿ: ಶತಮಾನದ ಸಂತ, ಶ್ರೇಷ್ಠ ದಾರ್ಶನಿಕರಾದ ಪೂಜ್ಯ ಸಿದ್ದೇಶ್ವರ ಶ್ರೀಗಳ ಭಾವಚಿತ್ರವನ್ನು ನೀಡುವ ಮೂಲಕ ಜನೆವರಿ 2ರಂದು ಹಮ್ಮಿಕೊಂಡ ಸಿದ್ದೇಶ್ವರ ಶ್ರೀಗಳ ನುಡಿ ನಮನ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಪೂಜ್ಯ ಶ್ರೀಗಳ ನುಡಿನಮನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಇಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಿಕಟಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಬೋಳಸೂರರವರು, ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ ಅವರಿಗೆ ಶ್ರೀಗಳ ಭಾವಚಿತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟಿ.ಎಸ್.ಆಲಗೂರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪೂಜ್ಯ ಶ್ರೀಗಳು ನಡೆನುಡಿಯಲ್ಲಿ ಒಂದೇ ಆಗಿದ್ದರು. ಅವರ ವಿಚಾರಗಳು ಇಂದಿನ ವಿದ್ಯಾರ್ಥಿ ಹಾಗೂ ಶಿಕ್ಷಕ ಸಮುದಾಯಕ್ಕೆ ನಿತ್ಯ ಅನ್ವಯಿಕಗಳಾಗಿವೆ. ಜಗದೀಶ ಬೋಳಸೂರರವರು ಎಲ್ಲಾ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶ್ರೀಗಳ ಭಾವಚಿತ್ರ ನೀಡುವ ಮೂಲಕ ಶಾಲಾ ಮಕ್ಕಳಿಗೆ ಒಳ್ಳೆಯ ಆಚಾರ- ವಿಚಾರ-ಸಂಸ್ಕಾರಗಳು ಪ್ರೇರಣೆ – ಯಾಗಲಿಯೆಂದರು.
ಭಾವಚಿತ್ರ ನೀಡಿ ಮಾತನಾಡಿದ ಜಗದೀಶ ಬೋಳಸೂರರವರು ಶ್ರೀಗಳು ಅಸ್ತಂಗತರಾಗಿ ಒಂದು ವರುಷ ಕಳೆಯುತ್ತಿರುವ ಈ ಸಂದರ್ಭದಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನದ ಖನಿಜ, ನಡೆದಾಡುವ ಸಂತರಾದ ಪೂಜ್ಯ ಸಿದ್ದೇಶ್ವರ ಶ್ರೀಗಳು ಬಾಳಿ ಬದುಕಿದ ಕಾಲದಲ್ಲಿ ನಾವು ಜನಿಸಿದ್ದೇ ನಮ್ಮ ಪೂರ್ವಜನ್ಮದ ಪುಣ್ಯವಾಗಿದೆ. ಇಂತಹ ಮಹಾತ್ಮರ ಭಾವಚಿತ್ರವನ್ನು ಜಿಲ್ಲೆಯ ಎಲ್ಲಾ ಸರಕಾರಿ ಪ್ರಾಥಮಿಕ ಪ್ರೌಢ ಶಾಲೆಗಳಿಗೆ ನೀಡಿ ಈ ನನ್ನ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಲು ನುಡಿ ನಮನ ಕಾರ್ಯಕ್ರಮಕ್ಕೆ ಹೊಸ ರೂಪ ಪಡೆಯಲಿಯೆಂದು ಆಶಿಸಿದರು.
ಈ ಸಂದರ್ಭದಲ್ಲಿ ಇಂಡಿ ತಾಲೂಕಾ ನೌಕರ ಸಂಘದ ಅಧ್ಯಕ್ಷ ಎಸ್.ಡಿ.ಪಾಟೀಲ, ತಾಲೂಕಾ ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಸ್.ವಿ.ಹರಳಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ವಾಯ್.ಟಿ.ಪಾಟೀಲ, ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಆರ್.ಪಾಟೀಲ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೈಟಿ ಅಧ್ಯಕ್ಷ ಪಿ.ಎಸ್.ಚಾಂದಕವಠ, ತಿಕೋಟಾ ತಾಲೂಕ ಸರಕಾರಿ ನೌಕರರ ಸಂಘದ ಅಧ್ಯಕ್ಷ ಚನ್ನಯ್ಯ ಮಠಪತಿ, ಸಿ.ಎಸ್.ಝಳಕಿ, ಎಸ್.ಎನ್.ಕೋಳಿ, ಕೆ.ಎನ್.ಕಾಂಬಳೆ, ಎಮ್.ಎಮ್.ನೇದಲಗಿ, ಜಗದೀಶ ಚವಡಿಹಾಳ, ಮೋಹನ ಕಟಕದೊಂಡ, ಪ್ರಕಾಶ ಐರೋಡಗಿ ಭಾಗವಹಿಸಿದರು.