ಇಂಡಿ ಪಟ್ಟಣದ ಗ್ರಂಥಾಲಯಕ್ಕೆ ನಿರ್ದೇಶಕರ ಭೇಟಿ
ಇಂಡಿ: ತಾಲೂಕ ಕೇಂದ್ರ ಗ್ರಂಥಾಲಯಕ್ಕೆ ಗ್ರಂಥಾಲಯ ಇಲಾಖೆ ರಾಜ್ಯ ನಿರ್ದೇಶಕ ಸತೀಶಕುಮಾರ ಹೊಸಮನಿ ಇಂದು ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿನ ಸಿಬ್ಬಂದಿಯು ಗ್ರಂಥಾಲಯವನ್ನು ಜನಸ್ನೇಹಿಯಾಗಿ ರೂಪಿಸಿದ್ದಾರೆ.ಈ ಗ್ರಂಥಾಲಯ ಸಾಕಷ್ಟು ಓದುಗರನ್ನು ಆಕರ್ಷಿಸುವಲ್ಲಿ ಗ್ರಂಥಾಲಯ ಸಹಾಯಕ ಮದರಸಾಬ ಚೌಧರಿ ಹಾಗೂ ಡಿ ಬಿ ರಜಪೂತ ಅವರ ಕೊಡುಗೆ ಅಪಾರವಾಗಿದೆ ಎಂದರು. ಈ ಗ್ರಂಥಾಲಯವನ್ನು ತಾಲೂಕ ಪಂಚಾಯಿತಿಯ ಹಳೆಯ ಕಟ್ಟಡಕ್ಕೆ ಬೇಗ ವರ್ಗಾಯಿಸಿ, ಇನ್ನಷ್ಟು ಜನಸ್ನೇಹಿ ಗ್ರಂಥಾಲಯವನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು.
ಸರಕಾರ ಗ್ರಂಥಾಲಯ ಉತ್ತೇಜನಕ್ಕೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಇಲ್ಲಿನ ಜನತೆಯ ಬೇಡಿಕೆಯಂತೆ ಇನ್ನು ಹೆಚ್ಚು ಪುಸ್ತಕ, ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಂಥಾಲಯದತ್ತ ಯುವಕರನ್ನು ಆಕರ್ಷಿಸಲು ನಾನಾ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಗ್ರಂಥಾಲಯ ಉಪನಿರ್ದೇಶಕ ಅಜಯಕುಮಾರ ಡಿ,ಗ್ರಂಥಾಲಯದ ಸಹಾಯಕರಾದ ಮದರಸಾಬ ಚೌಧರಿ ಹಾಗೂ ಡಿ ಬಿ ರಜಪೂತ ಅವರು ಉಪಸ್ಥಿತರಿದ್ದರು.