ಮಸ್ಕಿ: ಪಟ್ಟಣದಲ್ಲಿ ಶುಕ್ರವಾರ ಸಂಜೆ 9ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ಕೊಲೆ ನಡೆದು ಪಟ್ಟಣವಾಸಿಗಳನ್ನು ಬೆಚ್ಚಿಬೀಳಿಸಿತ್ತು. ಆದರೆ ಈ ಕೊಲೆಗೆ ಕಾರಣ ನಿಗೂಢವಾಗಿಯೇ ಉಳಿದುಕೊಂಡಿತ್ತು. ಕೊಲೆಯಾಗಿ ಪ್ರಕರಣ ದಾಖಲಾಗುತ್ತಿದ್ದಂತೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆ ಆರಂಭಿಸಿದ್ದು ಕೊಲೆಗೆ ಅಸಲಿ ಸತ್ಯವನ್ನು ಬಯಲು ಮಾಡಿದ್ದಾರೆ. ಈಕೆಯ ಕೊಲೆಯ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ರಮೇಶ್ ಎಂಬ 28 ವರ್ಷದ ಯುವಕನೇ ಈಕೆಯ ಹತ್ಯೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಭೂಮಿಕಾ ರಮೇಶ್‌ನ ಸೋದರತ್ತೆಯ ಮಗಳು. ಆಕೆ ಮದುವೆಗೆ ನಿರಾಕರಿಸಿದ್ದಕ್ಕೆ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕಳೆದೊಂದು ವರ್ಷದಲ್ಲಿ ರಮೇಶ್ ಬಾಲಕಿಯನ್ನು ಪ್ರೀತಿಸುತ್ತಿದ್ದ. ಆದರೆ ಸಗೋತ್ರ ಇರುವ ಕಾರಣ ಭೂಮಿಕಾ ಕುಟುಂಬಸ್ಥರು ಮದುವೆಗೆ ನಿರಾಕರಿಸಿದ್ದರು. ನಿನ್ನೆ ಬೆಂಗಳೂರಿನಿಂದ ಮಸ್ಕಿಗೆ ಬಂದಿದ್ದ ರಮೇಶ ಶಾಲೆಗೆ ಹೋಗಿ ಭೂಮಿಕಾಳನ್ನು ಕರೆದುಕೊಂಡು ಬರುವುದಾಗಿ ಹೇಳಿದ್ದಾನೆ. ನಂತರ ಆಕೆಯ ಮೇಲೆ ಹಲ್ಲೆ ಮಾಡಿ ಮದುವೆಯಾಗುವಂತೆ ಪೀಡಿಸಿದ್ದಾನೆ. ನಂತರ ಬಳಿಕ ಚಾಕುವಿನಿಂದ ಇರಿದಿದ್ದಾನೆ. ನಿರ್ಜನ ಪ್ರದೇಶದಿಂದ ಮುಖ್ಯ ರಸ್ತೆಗೆ ಓಡಿ ಬಂದು ಒದ್ದಾಡಿ ಪ್ರಾಣಬಿಟ್ಟಿದ್ದಳು ಭೂಮಿಕಾ. ಈ ಸಂಬಂಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.