ದ್ರಾಕ್ಷಿ ಬೆಳೆಗಾರರ ಬಾಕಿ ವಿಮೆ ಹಣ ತಕ್ಷಣ ಬಿಡುಗಡೆಗೆ ಆಗ್ರಹ: ಜಿಲ್ಲಾಧಿಕಾರಿಗಳಿಗೆ ಬಿಜೆಪಿ ನಿಯೋಗದಿಂದ ಮನವಿ
ವಿಜಯಪುರ, ಮಾರ್ಚ್ 13: 2024-25ನೇ ಸಾಲಿನ ಹವಾಮಾನ ಆಧಾರಿತ ವಿಮಾ ಯೋಜನೆಯಡಿ ವಿಮೆ ಕಂತು ಪಾವತಿಸಿದ್ದರೂ ಪರಿಹಾರದಿಂದ ವಂಚಿತರಾಗಿರುವ ಜಿಲ್ಲೆಯ 931 ದ್ರಾಕ್ಷಿ ಬೆಳೆಗಾರರಿಗೆ ತಕ್ಷಣವೇ ವಿಮಾ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಗುರುಲಿಂಗಪ್ಪ ಅಂಗಡಿ ಅವರ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಪತ್ರ ಅರ್ಪಿಸಿತು. ಕಳೆದ ಸಾಲಿನಲ್ಲಿ ಅತಿವೃಷ್ಟಿ, ಅನಾವೃಷ್ಟಿ ಹಾಗೂ ರೋಗಬಾಧೆಯಿಂದ ದ್ರಾಕ್ಷಿ ಬೆಳೆ ನಷ್ಟವಾಗಿತ್ತು. ಜಿಲ್ಲೆಯಲ್ಲಿ 15 ಸಾವಿರಕ್ಕೂ ಅಧಿಕ ಬೆಳೆಗಾರರು ವಿಮೆ ಮಾಡಿಸಿದ್ದರು. ಆದರೆ, ನಿಯಮಾನುಸಾರ ವಿಮೆ ಕಂತು ಪಾವತಿಸಿದ್ದರೂ, ನಕಲಿ ಕ್ಷೇತ್ರ ಎಂಬ ನೆಪವೊಡ್ಡಿ ವಿಮಾ ಕಂಪನಿಗಳು ಜಿಲ್ಲೆಯ 931 ಬೆಳೆಗಾರರಿಗೆ (ವಿಶೇಷವಾಗಿ ಬಬಲೇಶ್ವರ ತಾಲೂಕಿನ ರೈತರಿಗೆ) ಪರಿಹಾರ ನೀಡದೆ ಸತಾಯಿಸುತ್ತಿವೆ ಎಂದು ಮುಖಂಡರು ಆರೋಪಿಸಿದರು.
ಈ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ವಿಮಾ ಕಂಪನಿಯೊಂದಿಗೆ ಮಾತನಾಡಿ, ಬಾಕಿ ಉಳಿದಿರುವ ಎಲ್ಲಾ ಅರ್ಹ ದ್ರಾಕ್ಷಿ ಬೆಳೆಗಾರರ ಖಾತೆಗಳಿಗೆ ತಕ್ಷಣವೇ ವಿಮೆ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪರಿಹಾರ ವಂಚಿತ ರೈತರೊಂದಿಗೆ ಸೇರಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಈ ಸಂದರ್ಭದಲ್ಲಿ *ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ, ಪಕ್ಷದ ಮುಖಂಡರಾದ ಸಂಜಯ ಪಾಟೀಲ ಕನಮಡಿ, ಉಮೇಶ ಕೊಳಕೂರ, ಚಿದಾನಂದ ಚಲವಾದಿ, ಸಂಗನಗೌಡ ಚಿಕ್ಕೊಂಡ, ಅಬ್ದುಲರಜಾಕ ವಾಲೀಕಾರ, ಜಗದೀಶ ಪಂಪಣ್ಣವರ, ಸಿದ್ದಗೊಂಡ ಬಿರಾದಾರ, ಮಲ್ಲಿಕಾರ್ಜುನ ದೇವರಮನಿ, ಮಲ್ಲು ಕನ್ನೂರ, ಸ್ವಪ್ನಾ ಕಣಮುಚನಾಳ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


















