ಅಫಜಲಪುರ: ಮನುಷ್ಯ ಜೀವನ ಬಹಳ ಶ್ರೇಷ್ಠವಾದುದ್ದು. ಈ ಬದುಕಿನಲ್ಲಿ ನಾವು ಮಾಡುವ ಕರ್ಮಗಳೇ ನಮ್ಮ ಸಫಲತೆ, ವಿಫಲತೆಯ ಮಾಪಕಗಳಾಗಿದ್ದು ಇಂದಿನ ಮಕ್ಕಳು ನಾಳಿನ ಸಾಧಕರಾಗಲು ಎಲ್ಲಾ ಪಾಲಕರು ತಮ್ಮ ಮಕ್ಕಳಲ್ಲಿ ಸದ್ಗುಣಗಳನ್ನು ಬೆಳೆಸುವ ಕೆಲಸ ಮಾಡಬೇಕೆಂದು ಡಾ. ಅಭಿನವ ಚನ್ನಮಲ್ಲ ಶಿವಾಚಾರ್ಯರು ಹೇಳಿದರು.
ಅವರು ತಾಲೂಕಿನ ಬಡದಾಳ ಗ್ರಾಮದ ಗುರು ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಾತೃ, ಪಿತೃ ವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳು ಹಾಗೂ ಪಾಲಕರನ್ನುದ್ದೇಶಿಸಿ ಮಾತನಾಡುತ್ತಾ ಬದುಕು ಎನ್ನುವುದು ಭಗವಂತ ನಮಗೆ ಕೊಟ್ಟಿರುವ ವರ. ಇದನ್ನು ನಾವು ಬಹಳ ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಗುರು, ಹಿರಿಯರು, ತಂದೆ ತಾಯಿಯರಿಗೆ ವಿಧೇಯರಾಗಿರಬೇಕು. ದೇಶಕ್ಕೆ, ನಾಡಿಗೆ ಕೀರ್ತಿ ತರುವಂತವರಾಗಬೇಕು ಎಂದ ಅವರು ನಗರ ಪ್ರದೇಶಗಳಿಗೆ ಹೋಲಿಸಿದರೆ ಹಳ್ಳಿಗಳಲ್ಲಿ ಇನ್ನೂ ಸಂಸ್ಕಾರ, ಸಂಸ್ಕೃತಿಗಳು ಉಳಿದಿವೆ. ಎಲ್ಲಾ ಮಕ್ಕಳು ಮನೆಯಿಂದ ಶಾಲೆಗೆ ಬರುವ ಮುನ್ನ ತಂದೆ, ತಾಯಿಯರ ಆಶಿರ್ವಾದ ಪಡೆದು ಬರುವಂತಾಗಬೇಕು. ಗುರು, ಹಿರಿಯರು, ಶಿಕ್ಷಕರನ್ನು ಕಂಡಾಗ ಗೌರವಿಸುವಂತಾಗಬೇಕು. ಅಂದಾಗ ಬದುಕು ಬಂಗಾರವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಶಿಕ್ಷಕ ಅರವಿಂದ ಖೈರಾಟ್, ಪಾಲಕ ವಿಶ್ವನಾಥ ಸರಸಂಗಿ ಮಾತನಾಡುತ್ತಾ ಮಕ್ಕಳು ಮೊಬೈಲ್, ಟಿವಿಗಳಿಂದಾಗಿ ಹಾಳಾಗುತ್ತಿದ್ದಾರೆ. ಆದರೆ ಮೊಬೈಲ್ ಮತ್ತು ಟಿವಿಗಳಲ್ಲೂ ಒಳ್ಳೆಯ ಉಪಯೋಗಗಳಿವೆ. ಆದರೆ ಪಾಲಕರಾದವರು ಮಕ್ಕಳು ಹಠ ಮಾಡುತ್ತಾರೆನ್ನುವ ಒಂದೇ ಕಾರಣಕ್ಕೆ ಅವರಿಗೆ ಉಪಯೋಗವಾಗುವುದನ್ನು ಕೊಡುವ ಬದಲಾಗಿ ಯ್ಯೂಟ್ಯೂಬ್, ಪಬ್ಜಿ, ಮಣ್ಣು ಮಸಿ ಅಂತೆಲ್ಲ ನೋಡಲು ಬಿಟ್ಟು ಬಿಡುತ್ತಾರೆ. ಆದರೆ ಚಂದನ ವಾಹಿನಿಯಂತ ಅದ್ಬುತ ವಾಹಿನಿ ಇನ್ನೊಂದಿಲ್ಲ. ಅದನ್ನು ನೋಡಲು ಕಲಿಸಿ, ಮೊಬೈಲ್‌ನಲ್ಲೇ ಒಳ್ಳೋಳ್ಳೆ ಮಾಹಿತಿಗಳನ್ನು ಕಲೆ ಹಾಕಬಹುದಾಗಿದೆ ಅದನ್ನು ಕಲಿಸಿ ಇಲ್ಲವೇ ಮೊಬೈಲ್ ಗೀಳಿನಿಂದ ನಿಮ್ಮ ಮಕ್ಕಳನ್ನು ಹೊರ ತನ್ನಿ ಇಲ್ಲವಾದರೆ ನಿಮ್ಮ ಮಕ್ಕಳು ಮೊಬೈಲ್‌ಗಳಿಗೆ ದಾಸರಾದರೆ ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ ಎಂದು ಎಚ್ಚರಿಸಿದ ಅವರು ಮಕ್ಕಳನ್ನು ಶಾಲೆಗೆ ಕಳುಹಿಸಿ ನೀವು ನಿಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿದರೆ ನಿಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ನಿತ್ಯ ನಿಮ್ಮ ಮಕ್ಕಳು ಏನೇನು ಅಭ್ಯಾಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಹೇಗೆ ವ್ಯವಹರಿಸುತ್ತಾರೆ. ಗುರು, ಹಿರಿಯರನ್ನು ಹೇಗೆಲ್ಲ ಸಂಬೋಧನೆ ಮಾಡುತ್ತಾರೆ ಎನ್ನುವುದನ್ನು ಗಮನಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಕಾಂತ ನಿಂಬಾಳ, ಮಲ್ಲಿನಾಥ ಅತನೂರೆ, ರಾಜು ಸಾಣಾಕ್, ಗೋರಖನಾಥ ಮಳಗಿ, ಶಿವಶರಣ ಡಬ್ಬಿ, ಕಲ್ಲಪ್ಪ ಚಾಂಬಾರ, ರಮೇಶ, ಆಶಾಕಿರಣ ಸಂಸ್ಥೆಯ ಅಧ್ಯಕ್ಷೆ ಪ್ರಭಾವತಿ ಮೇತ್ರೆ ಸೇರಿದಂತೆ ಶಾಲಾ ಮಕ್ಕಳು, ಮಕ್ಕಳ ಪಾಲಕರು, ಗ್ರಾಮಸ್ಥರು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.