Voice Of Janata :Editor :
ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಕಡಲೆಕಾಯಿ ತಿನ್ನುತ್ತಿದ್ರಾ?
ಅಯೋಧ್ಯೆ ಕೇಸ್ ವಿಚಾರಕ್ಕೆ ಸಂಬಂಧಿಸಿ ವಿಪಕ್ಷ ನಾಯಕ ಆರ್.ಅಶೋಕ್ ಬಿಜೆಪಿ ಸರಕಾರವಿದ್ದಾಗ ಗೃಹಸಚಿವರಾಗಿದ್ದರು. ಆಗ ಅವರು ಕಡಲೆಕಾಯಿ ತಿನ್ನುತ್ತಿದ್ರಾ? ಅವರು ಯಾಕೆ ಆಗ ಅಯೋಧ್ಯೆಗೆ ಸಂಬಂಧಿಸಿದ ಗಲಭೆಯ ಆರೋಪಿಗಳ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದುಕೊಂಡಿರಲಿಲ್ಲ? ಎಂದು ಕೆಪಿಸಿಸಿ ಉಪಾಧ್ಯಕ್ಷ, ವಿಧಾನಪರಿಷತ್ ಮಾಜಿ ಸಭಾಪತಿ ವಿ.ಸುದರ್ಶನ್ ಪ್ರಶ್ನಿಸಿದ್ದಾರೆ. ಮಂಗಳವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ಗಲಭೆಗೆ ಸಂಬಂಧಿಸಿದ 31 ವರ್ಷಗಳ ಹಿಂದಿನ ಪ್ರಕರಣಗಳ ಇತ್ಯರ್ಥಕ್ಕಾಗಿ ಸಾಮಾನ್ಯವಾದ ಸುತ್ತೋಲೆ ಕಳುಹಿಸಲಾಗಿದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಪ್ರಕರಣಗಳ ಬಗ್ಗೆ ಕೋರ್ಟ್ ತೀರ್ಪು ನೀಡುತ್ತದೆ. ಇದರಲ್ಲಿ ಕಾಂಗ್ರೆಸ್‌ನ ರಾಜಕೀಯ ಉದ್ದೇಶವಿಲ್ಲ. ಬಿಜೆಪಿಯವರಿಗೆ ಅಯೋಧ್ಯೆ ರಾಜಕಾರಣಕ್ಕೆ ಮಾತ್ರ ಬೇಕು ಎಂದು ಟೀಕಿಸಿದರು.
ಆಂಜನೇಯ ಹೇಳಿಕೆ ವೈಯಕ್ತಿಕ ‘ಆಯೋಧ್ಯೆಯಲ್ಲಿರುವುದು ಬಿಜೆಪಿಯ ರಾಮ, ನಮ್ಮ ರಾಮ ಸಿದ್ಧರಾಮಯ್ಯ’ ಎಂದು ಮಾಜಿ
ಸಚಿವ ಎಚ್.ಆಂಜನೇಯಪ್ಪ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸುದರ್ಶನ್ ಅವರು, ‘ಆಂಜನೇಯ ಅವರು ನೀಡಿರುವ ಹೇಳಿಕೆ ಅವರದ್ದು ವೈಯಕ್ತಿಕ. ಆದರೆ ಸಿದ್ದರಾಮಯ್ಯ ಜನ ಸಮೂಹದ ನಾಯಕ ಎಂಬುದು ನಿಜ’ ಎಂದರು. ಬದುಕಿನ ಪ್ರಶ್ನೆಗಳೂ ಇವೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕುರಿತು ಮಾತನಾಡಿದ ಸುದರ್ಶನ್ ಅವರು, ನಾವು ಧಾರ್ಮಿಕ ವಿಚಾರಗಳನ್ನು ಗೌರವಿಸುತ್ತೇವೆ. ಯಾವುದೇ ಅವಹೇಳನ, ಅಗೌರವ ಮಾಡುವುದು ನಮ್ಮ ಧೋರಣೆಯಲ್ಲ. ಆದರೆ ಅದೊಂದೇ ದೇಶದಲ್ಲಿ ವಿಚಾರ ಇರುವುದಲ್ಲ. ಜನರ ಬದುಕಿನ ಪ್ರಶ್ನೆಗಳು ಕೂಡ ಇವೆ. ಕೇಂದ್ರ ಸರಕಾರ ಅಂತಹ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ದೇಶದ ಜನತೆ ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ ಎಂದು ಹೇಳಿದರು.