ಸಮಾಜದಲ್ಲಿ ಅಪರಾಧ ಚಟುವಟಿಕೆ ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರವೂ ಮುಖ್ಯ : ಪಿಎಸ್‍ಐ ರೇಣುಕಾ
ಇಂಡಿ : ಜನರು ಶಾಂತಿ ಮತ್ತು ನೆಮ್ಮದಿಯಿಂದ ಜೀವನ
ಸಾಗಿಸಲು ಇರುವ ಕಾನೂನುನ್ನು ಪಾಲನೆ ಮಾಡುವ
ಕಡೆ ಸಾರ್ವಜನಿಕರು ಗಮನ ನೀಡಬೇಕು ಎಂದು
ಇಂಡಿ ಶಹರ ಪೊಲೀಸ್ ಠಾಣೆಯ ಪಿಎಸ್‍ಐ ರೇಣುಕಾ ಹಳ್ಳಿ ಹೇಳಿದರು. ಅವರು ಸೋಮವಾರ ಪಟ್ಟಣದ ಗಾಂಧೀ ವೃತ್ತದಲ್ಲಿರುವ ಕೆಜಿಎಸ್ ಶಾಲೆಯಲ್ಲಿ
ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆಯಲ್ಲಿ ಮಾತನಾಡಿದರು.
ಸಮಾಜದಲ್ಲಿ ಅಪರಾಧ ಚಟುವಟಿಕೆ ನಡೆಯದಂತೆ
ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರವೂ ಮುಖ್ಯವಾಗಿರುತ್ತದೆ. ಅಪರಾಧ ಕಂಡು ಬಂದರೆ
ವಿದ್ಯಾರ್ಥಿಗಳು ಹಾಗೂ ಯುವ ಜನರೂ ಸಹ ಠಾಣೆಗೆ
ಮಾಹಿತಿ ನೀಡುವ ಮೂಲಕ ಪೊಲೀಸರೊಂದಿಗೆ
ಸಹಕರಿಸಬೇಕು ಎಂದರು. ಯಾರೂ ಸಹ ಹುಟ್ಟುತ್ತಲೇ ಅಪರಾಧಿಗಳಾಗಲ್ಲ. ಅವರು ಬೆಳೆಯುವ ಪರಿಸರ ಹಾಗೂ ಪರಿಸ್ಥಿತಿ ಅವರನ್ನು ಅಪರಾಧ ಲೋಕಕ್ಕೆ
ಕರೆದೊಯ್ಯುತ್ತದೆ. ಹಾಗಾಗಿ ಮನೆ ಮತ್ತು ಶಾಲೆಗಳಲ್ಲಿ ಮಕ್ಕಳೀಗೆ ಉತ್ತಮ ಮಾರ್ಗದರ್ಶನ ಸಿಗಬೇಕು. ಆಗ ಅವರು ಹಾದಿ ತಪ್ಪುವುದಿಲ್ಲ ಎಂದರು.
ಇನ್ನೋರ್ವ ಪಿಎಸ್‍ಐ ಶಶಿಕಲಾ ಲಂಗೂಟಿ ಮಾತನಾಡಿ,
ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಸವಾರರು ತಪ್ಪದೇ ಹೆಲ್ಮಟ್ ಧರಿಸಿ. ನಾಲ್ಕು ಚಕ್ರ ವಾಹನಗಳನ್ನು ಚಲಾಯಿಸುವ ಸವಾರರು ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಇದರಿಂದ ಅಪಘಾತ ಸಂಭವಿಸಿದಾಗ ಜೀವಕ್ಕೆ ಅಪಾಯ ಕಡಿಮೆ ಯಾಗುತ್ತದೆ. ಸಮಾಜದ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸನ್ನದ್ಧ ಎಂದು ತಿಳಿಸಿದರು. ಎಎಸ್‍ಐ ಎಂಎಸ್. ಅರವತ್ತಿ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಮತ್ತು ಪೋಕ್ಸೋ ಕಾಯ್ದೆಯ ಕುರಿತು ಮಕ್ಕಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಅನೀಲ ಹೆಗಡ್ಯಾಳ, ಶಾಲಾ ಮುಖ್ಯಶಿಕ್ಷಕ ಯು.ಹೆಚ್. ಚವ್ಹಾಣ,
ಶಿಕ್ಷಕರಾದ ಪಿ.ಜಿಕಲ್ಮನಿ, ಎನ್.ಎ. ಬಿರಾದಾರ, ಎ.ಹೆಚ್. ಹೊಸಮನಿ, ಎಂ.ಎ. ಲಕಡಾರ್, ಎಸ್.ಎಸ್. ಕಾಂಬಳೆ ಸೇರಿದಂತೆ ಮತ್ತಿತರರು ಇದ್ದರು.