ಕ್ಷಯರೋಗ ಕುರಿತು ಸೂಕ್ತ ಅರಿವು-ತಿಳುವಳಿಕೆ ಮೂಡಿಸಿ
-ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ
ವಿಜಯಪುರ, ಡಿಸೆಂಬರ್ 05 : ನಮ್ಮ ನಡಿಗೆ ಕ್ಷಯಮುಕ್ತ ಕಡೆಗೆ ಎಂದು ಕ್ಷಯಮುಕ್ತ ಭಾರತವನ್ನಾಗಿಸುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ವಿವಿಧ ಆಯಾಮಗಳಲ್ಲಿ ವಯಸ್ಕ ಬಿಸಿಜಿ ಲಸಿಕಾ ಕಾರ್ಯಕ್ರಮ ವಿಜಯಪುರ ಸೇರಿದಂತೆ ರಾಜ್ಯದ 6 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಹಮ್ಮಿಕೊಳ್ಳಲಿದ್ದು, ಜಿಲ್ಲೆಯಾದ್ಯಂತೆ 100 ದಿನದ ಕ್ಷಯ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.
ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಎಚ್ಐವಿ-ಏಡ್ಸ್, ಟಿಬಿ ಸಮನ್ವಯ ಸಭೆ ಮತ್ತು ರಕ್ತ ಸನ್ನದ್ಧತಾ ಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಾದ್ಯಂತೆ ಯಶಸ್ವಿಯಾಗಿ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಜನಸಮುದಾಯಗಳಿಗೆ ಕ್ಷಯರೋಗದ ಕುರಿತು ಸೂಕ್ತ ಅರಿವು ಮೂಡಿಸುವಂತೆ ಅವರು ಸೂಚನೆ ನೀಡಿದರು.
ನಿಕ್ಷಯ ಪೋಷಣೆ ಯೋಜನೆ ಭಾರತ ಸರ್ಕಾರದ ಮಹಾತ್ವಾಂಕ್ಷೆಯ ಯೋಜನೆಯಾಗಿದ್ದು, ಅಪೌಷ್ಠಿಕತೆಯನ್ನು ನಿವಾರಿಸುವಲ್ಲಿ ಕ್ಷಯರೋಗಿಗಳಿಗೆ ಆರ್ಥಿಕ ಸಹಾಯ ನೀಡುವುದು, ಚಿಕಿತ್ಸೆ ಪಡೆಯುತ್ತಿರುವ ಕ್ಷಯರೋಗಿಗಳಿಗೆ ಚಿಕಿತ್ಸೆ ಸಂಪೂರ್ಣ ಮುಗಿಯವರೆಗೆ ಪ್ರತಿ ತಿಂಗಳು ಒಂದು ಸಾವಿರ ರೂ. ರೋಗಿಗಳ ನೇರ ಖಾತೆ ಹಣ ಸಂದಾಯ, ಪ್ರಧಾನಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನದಡಿಯಲ್ಲಿ ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ಗಳನ್ನು ಸಮುದಾಯದ ಸಹಭಾಗಿತ್ವದಲ್ಲಿ ಪೂರೈಸಲಾಗುತ್ತಿರುವ ಕುರಿತು ಹಾಗೂ ಕ್ಷಯರೋಗಿಗಳಿಗೆ ವಿಶೇಷ ಸೌಲಭ್ಯಗಳ ಕುರಿತು ಸೂಕ್ತ ಜಾಗೃತಿ ಮೂಡಿಸುವಂತೆ ಅವರು ಸೂಚನೆ ನೀಡಿದರು.
ಎಚ್ಐವಿ ಏಡ್ಸ್ ಸೋಂಕಿತ ಮತ್ತು ಬಾಧಿತರಿಗೆ ಇಲಾಖಾವಾರು ನೀಡುವ ಸಾಮಾಜಿಕ ಸೇವಾ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಬೇಕು. ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಹೆಚ್ಚಿನ ತಿಳುವಳಿಕೆ ಮೂಡಿಸಬೇಕು. ಕಲಾ ತಂಡಗಳ ಮೂಲಕ ಸಂತೆ-ಜಾತ್ರೆಗಳ ಬೀದಿನಾಟಕಗಳನ್ನು ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಸಂಪತ್ ಗುಣಾರಿ, ಆಹಾರ ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ, ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ವರಿ ಗೊಲಗೇರಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.