ಮುದ್ದೇಬಿಹಾಳ:ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನರೇಗಾ ಫಲಾನುಭವಿಗಳಿಗೆ ನರೇಗಾದಡಿ ಸೌಲಭ್ಯಗಳಿದ್ದು, ಯಾರು ವಂಚಿತರಾಗದೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಹಾಯಕ ನಿರ್ದೇಶಕರು (ಗ್ರಾ.ಉ.) ಹಾಗೂ ಕವಡಿಮಟ್ಟಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳೂ ಆದ ಪಿ.ಎಸ್.ಕಸನಕ್ಕಿ ಹೇಳಿದರು.
ತಾಲ್ಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕವಡಿಮಟ್ಟಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ದುಡಿಯೋಣ ಬಾ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಬೇಸಿಗೆ ಅವಧಿಯಲ್ಲಿ ನರೇಗಾ ಯೋಜನೆಯಡಿ ನಿರಂತರ ಕೆಲಸ ನೀಡಲು ಕವಡಿಮಟ್ಟಿ ಗ್ರಾಮ ಪಂಚಾಯತಿ ತಯಾರಿದ್ದು, ಎಲ್ಲರೂ ಕೆಲಸಕ್ಕಾಗಿ ಬೇಡಿಕೆ ಅರ್ಜಿ ಸಲ್ಲಿಸಿ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನರೇಗಾ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗಪಡೆದುಕೊಳ್ಳಬೇಕು. ಎಪ್ರಿಲ್ ನಿಂದ ಜೂನ್ ತಿಂಗಳವರೆಗೆ ಮೂರು ತಿಂಗಳು ನಿರಂತರ ಕೆಲಸ ನೀಡುವ ಮೂಲಕ ವಲಸೆ ತಪ್ಪಿಸಬಹುದಾಗಿದ್ದು, ಯಾರು ಬೇರೆ ಬೇರೆ ಊರುಗಳಿಗೆ ಕೆಲಸ ಹರಸಿ ವಲಸೆ ಹೋಗದೆ ಇದ್ದೂರಲ್ಲೆ ದುಡಿದು ಜೀವನ ನಿರ್ವಹಣೆ ಮಾಡಿ ಎಂದು ತಿಳಿಸಿದರು.
ಪ್ರಸ್ತುತ ನರೇಗಾ ಕೂಲಿ ದರ ರೂ. 370 ಹೆಚ್ಚಳವಾಗಿದೆ. 100 ದಿನ ದುಡಿದ ಕೂಲಿಕಾರರಿಗೆ ರೂ. 37000 ಸಿಗಲಿದೆ. ನರೇಗಾ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಆಗಲಿದ್ದು, ಯಾರು ಆತಂಕ ಪಡದೆ ಕೆಲಸಕ್ಕೆ ಬನ್ನಿ ಎಂದು ಆಹ್ವಾನ ನೀಡಿದರು.
ಈ ವೇಳೆ ನರೇಗಾ ಯೋಜನೆಯ ತಾಲೂಕು ಐಇಸಿ ಸಂಯೋಜಕ ಪರಮೇಶ ಹೊಸಮನಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಅಶೋಕ ಕೊರವರ ಹಾಗೂ ಗ್ರಾ.ಪಂ.ಸಿಬ್ಬಂದಿ ಇದ್ದರು.