ರಾಜ್ಯದಲ್ಲಿ 20 ಲೋಕಸಭಾ ಸ್ಥಾನ ಗೆಲುವು: ಸುಣಗಾರ
ದೇವರಹಿಪ್ಪರಗಿ : ದೇಶಕ್ಕೆ ಮಾದರಿಯಾದ ಗ್ಯಾರಂಟಿ ಯೋಜನೆಗಳ ಮೂಲಕ ಜನಮನ ಗೆದ್ದಿದ್ದೇವೆ. ಗ್ಯಾರಂಟಿ ಯೋಜನೆಗಳ ಮೂಲಕ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಸುಭದ್ರವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಿಸಿಕೊಡಲಾಗುವುದು ಎಂದು ಮಾಜಿ ಶಾಸಕ ದೇವರಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಶರಣಪ್ಪ ಸುಣಗಾರ ಹೇಳಿದರು.
ಶನಿವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ದೇವರಹಿಪ್ಪರಗಿ ಪಟ್ಟಣದ ಮೊಹರೆ ಹನುಮಂತರಾಯ ವೃತ್ತದಲ್ಲಿ ಸನ್ಮಾನ ಮಾಡಿ, ನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದ ಅಭಿವೃದ್ಧಿಪರ ಯೋಜನೆಗಳಿಂದ ರಾಜ್ಯದಲ್ಲಿ ಜನ ನೆಮ್ಮದಿ ನಿಟ್ಟುಸಿರು ಬಿಟ್ಟಂತಾಗಿದೆ.
ದೇಶಕ್ಕೆ ಮಾದರಿಯಾದ ಗ್ಯಾರಂಟಿ ಯೋಜನೆಗಳ ಮೂಲಕ ಜನಮನ ಗೆದ್ದಿದ್ದೇವೆ. ಕಾಂಗ್ರೆಸ್ ಬೆಂಬಲ ಕಂಡು ಬಿಜೆಪಿ ಅಪಪ್ರಚಾರ ನಡೆಸಿದೆ. ಅದರಲ್ಲೂ ಚಿತ್ರದುರ್ಗದಲ್ಲಿ ನಡೆದ ಶೋಷಿತರ ಸಮಾವೇಷದಿಂದ ವಿಚಲಿತಗೊಂಡಿದ್ದು, ನಿತ್ಯ ಅಪಸ್ವರ ಹೊರಹಾಕುತ್ತಿದ್ದಾರೆ. ಆದರೆ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಲಾಗುವುದು. ವಿಶೇಷವಾಗಿ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಹೈಕಮಾಂಡ್ ಸೂಚಿಸಿದ ವ್ಯಕ್ತಿಯನ್ನು ದೇವರಹಿಪ್ಪರಗಿ ಮತಕ್ಷೇತ್ರದಿಂದ ಹೆಚ್ಚಿನ ಮತ ನೀಡಿ ಗೆಲುವಿಗೆ ಶ್ರಮಿಸಲಾಗುವುದು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಂಗನಗೌಡ ಹರನಾಳ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದಣ್ಣ ಪೂಜಾರಿ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸಂತೋಷಗೌಡ ದೊಡ್ಡಮನಿ, ಯುವ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಪ್ರಕಾಶ ಗುಡಿಮನಿ, ಮಹಿಳಾ ಅಧ್ಯಕ್ಷೆ ಸರಿತಾ ನಾಯಿಕ, ಸುನಂದಾ ಸೊನ್ನಳ್ಳಿ, ನಜೀರ ಬೀಳಗಿ, ಪರಶುರಾಮ ದಿಂಡವಾರ, ಅಸ್ಲಾಂಪಟೇಲ ಬಿರಾದಾರ, ಸುನೀಲ ಕನಮಡಿ, ಹುಸೇನ್ ಕೊಕಟನೂರ, ರಾಜು ಮೆಟಗಾರ, ರಾಜು ಸಿಂದಗೇರಿ, ಬಸವರಾಜ ಇಂಗಳಗೇರಿ, ಬೀರು ಹಳ್ಳಿ, ಲಾಲಾಸಾಬ ಮಳಖೇಡ, ಬಾಶೇಷಾಬ ಹಳ್ಳಿ, ಸಯ್ಯದ ರೂಗಿ, ಬಸಯ್ಯ ಮಲ್ಲಿಕಾರ್ಜುನಮಠ, ಮಹೇಶ ಮುರಾಳ ಸೇರಿದಂತೆ ಕಾಂಗ್ರೆಸ್ ಪದಾಧಿಕಾರಿಗಳು, ಐದನೂರುಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು.