ರಾಯಚೂರು : ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಶೇ 40 ರ ಕಮೀಷನ್ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರ ಈ ಕೂಡಲೇ ಆದೇಶಿಸಬೇಕು. ಕೆ.ಎಸ್ .ಈಶ್ವರಪ್ಪ ಕೂಡಲೇ ಬಂಧಿಸಬೇಕು. ಆತ್ಮಹತ್ಯೆಗೆ ಶರಣಾಗಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು. ಕೆ.ಎಸ್ . ಈಶ್ವರಪ್ಪ ಹಾಗೂ ಇತರ ಆರೋಪಿಗಳನ್ನು ಕೂಡಲೇ ಬಂಧಿಸಬೇಕು . ಪ್ರಕರಣದ ತನಿಖೆಯನ್ನು ರಾಜ್ಯ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ಉಸ್ತುವಾಲಯಲ್ಲಿ ನಡೆಸಲು ಕ್ರಮ ಜರುಗಿಸಬೇಕು. ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ಪಾಟೀಲ್ ಕುಟುಂಬಕ್ಕೆ ಒಂದು ಕೋಟಿ ರೂ.ಪರಿಹಾರ ಹಾಗೂ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು.ಮೃತರು ನಿರ್ವಹಿಸಿರುವ 108 ಕಾಮಗಾರಿಗಳ 4 ಕೋಟಿ ರೂ.ಗಳ ಬಿಲ್ ಪಾವತಿಸಬೇಕು ಎಂದು ಒತ್ತಾಯಿಸಿದರು.
ಈ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸಲಸುವ ಮೂಲಕ ಈ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಹಾಗೂ ಕರ್ನಾಟಕವನ್ನು ಭ್ರಷ್ಟಾಚಾರ ರಹಿತ ರಾಜ್ಯವನ್ನಾಗಿ ರೂಪಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರಖಂಡ್ರೆ,ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಎ.ಐ.ಸಿ.ಸಿ ಕಾರ್ಯದರ್ಶಿ ಎನ್.ಎಸ್ ಭೋಸರಾಜ,ಜಿಲ್ಲಾಧ್ಯಕ್ಷ ಬಿ.ವಿ ನಾಯಕ,ಪ್ರದಾನ ಕಾರ್ಯದರ್ಶಿ ಎ.ವಸಂತಕುಮಾರ,ಮಾಜಿ ಶಾಸಕರಾದ ಸಿರಾಜ್ ಶೇಖ್,ಸೈಯದ್ ಯಾಸೀನ್,ಶರಣಪ್ಪ ಮಟ್ಟುರು,ಜಿ.ಬಸವರಾಜ ರೆಡ್ಡಿ,ನಗರಸಭೆ ಸದಸ್ಯ ಜಯಣ್ಣ,ಕೆ ಶಾಂತಪ್ಪ,ಜಿ.ಶಿವಮೂರ್ತಿ,ಅಸ್ಲಾಂ ಪಾಷ, ತಾಯಣ್ಣ ನಾಯಕ,ಅಮರೇಗೌಡ ಹಂಚಿನಾಳ,ಅಬ್ದುಲ್ ಕರೀಂ,ರುದ್ರಪ್ಪ ಅಂಗಡಿ,ರಮೇಶ್ ಯಾದವ್ ಮಹಿಳಾ ಘಟಕ ಅಧ್ಯಕ್ಷ ನಿರ್ಮಲ ಬೆಣ್ಣೆ, ಸೇರಿದಂತೆ ಇತರರು ಉಪಸ್ಥಿತರಿದ್ದರು.