ಕಾಂಗ್ರೆಸ್ ಸರ್ಕಾರದ ಸಾಧನೆ ಸಮಾವೇಶ ವಿರುದ್ಧ ಬಿಜೆಪಿ ಯರು ಕಿಡಿ
ಇಂಡಿ : ಕಾಂಗ್ರೆಸ್ ಸರ್ಕಾರ ತನ್ನ ೨ ವರ್ಷದ ಆಡಳಿತದ ಸಾಧನೆಯ ಬಗ್ಗೆ ಸಮಾವೇಶ ಹಮ್ಮಿಕೊಳ್ಳುವ ಬದಲಿಗೆ ಆತ್ಮಾವಲೋಕನ ಸಮಾವೇಶ ಹಮ್ಮಿಕೊಂಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಇಂಡಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಲೇವಡಿ ಮಾಡಿದರು.
ಅವರು ಮಂಗಳವಾರ ಇಂಡಿ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಲು ದುಡ್ಡು ಹೊಂದಿಸಲು ಬೆಲೆ ಏರಿಕೆ ಮಾಡುವುದೇ ಇವರ ಸಾಧನೆ, ಅಭಿವೃಧ್ಧಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದೆ ಇವರ ಸಾಧನೆ ಎಂದು ಕುಟುಕಿದರು.
ಬಿಜೆಪಿ ಮುಖಂಡ ಕಾಸೂಗೌಡ ಬಿರಾದಾರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಭ್ರಷ್ಠ ಸರ್ಕಾರವಾಗಿದ್ದು, ಮತದಾರರು ಈ ಸರ್ಕಾರದ ಆಡಳಿತಕ್ಕೆ ಬೇಸತ್ತಿದ್ದಾರೆ. ಕಳೆದ ೨ ವರ್ಷಗಳಿಂದಲೂ ಯಾವದೇ ರಸ್ತೆಗೆ ಒಂದು ಬುಟ್ಟಿ ಮಣ್ಣು ಕೂಡಾ ಹಾಕಿಲ್ಲ. ಜನಸಾಮಾನ್ಯರು ರಸ್ತೆ ರಿಪೇರಿ ಮಾಡಿಸಬೇಕೆಂದು ಗೋಗರೆದರೂ ಕೂಡಾ ಅವರಿಗೆ ಯಾವದೇ ಪರಿಹಾರ ಸಿಕ್ಕಿಲ್ಲ. ಇನ್ನಿತರ ಯಾವದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಬಿಜೆಪಿ ಎಸ್.ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿ ವಗ್ಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಎಸ್‌ಸಿ, ಎಸ್.ಟಿ ಅವರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಅನುದಾನ ತನ್ನ ಗ್ಯಾರಂಟಿ ಯೋಜನೆಗೆ ಬಳಸಿಕೊಂಡು ದಲಿತ ಸಮುದಾಯಕ್ಕೆ ಘನ ಘೋರ ಅನ್ಯಾಯ ಮಾಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಸಿದ್ದಲಿಂಗ ಹಂಜಗಿ, ಶೀಲವಂತ ಉಮರಾಣ , ರವಿ ಬಗಲಿ, ಹಣಮಂತರಾಯಗೌಡ ಪಾಟೀಲ, ಅನೀಲಗೌಡ ಬಿರಾದಾರ ಮಾತನಾಡಿದರು. ದೇವೇಂದ್ರ ಕುಂಬಾರ ಸ್ವಾಗತಿಸಿ, ವಂದಿಸಿದರು.
ಇಂಡಿ: ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಕಿವುಡೆ ಮಾತನಾಡಿದರು.