ರಾಯಚೂರು : ನಗರಸಭೆ ಕುಡಿಯುವ ನೀರಿನ ಕುರಿತು ನಡೆದ ಸಭೆಯಲ್ಲಿ ಕಲುಷಿತ ನೀರಿನ ಸೇವನೆಯಿಂದ ಮೃತಪಟ್ಟ ಕುಟುಂಬಗಳಿಗೆ ತಲಾ ೧೦ ಲಕ್ಷ ಪರಿಹಾರ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಂತ್ರಸ್ತರಿಗೆ ೨೦ ಸಾವಿರ ರೂ. ವೈದ್ಯಕೀಯ ವೆಚ್ಚ, ಸಂಘ-ಸಂಸ್ಥೆಗಳ ಒತ್ತಾಯದ ಹಿನ್ನೆಲೆಯಲ್ಲಿ ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವುದಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸುವ ಸರ್ವಾನುಮತದ ನಿರ್ಣಯವನ್ನು ನಗರಸಭೆಯ ತುರ್ತು ಸಭೆಯಲ್ಲಿ ಕೈಗೊಳ್ಳಲಾಯಿತು.
ಕುಡಿವ ನೀರಿಗೆ ಸಂಬಂಧಿಸಿ ನಗರಸಭೆ ಅಧ್ಯಕ್ಷರಾದ ಲಲಿತಾ ಕಡಗೋಳ ಆಂಜಿನೇಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ತುರ್ತು ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ತೀವ್ರ ಮಾತಿನ ಚಕಮಕಿ ಘಟನೆ ನಡೆಯಿತು. ಆದರೆ, ಕಲುಷಿತ ಕುಡಿವ ನೀರಿನ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಸದಸ್ಯರು ಸರ್ವಾನು ಮತದಿಂದ ಪರಿಹಾರ ನೀಡುವುದಕ್ಕೆ ಸಂಬಂಧಿಸಿ ಒಕ್ಕೊರಳಿನ ನಿರ್ಣಯ ಕೈಗೊಂಡರು.
ಸಭೆ ಆರಂಭದಲ್ಲಿ ಆಯುಕ್ತ ಕೆ.ಗುರುಲಿಂಗಪ್ಪ ಅವರು, ಕಲುಷಿತ ನೀರು ಪ್ರಕರಣಕ್ಕೆ ಸಂಬಂಧಿಸಿ, ಸಭೆಗೆ ಮಾಹಿತಿ ನೀಡುವುದರೊಂದಿಗೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ವೆಂಕಟೇಶ ಮತ್ತು ಜೆಇ ಕೃಷ್ಣಾ ಅವರನ್ನು ಅಮಾನತುಗೊಳಿಸಿದ ವಿಷಯವನ್ನು ಸಭೆಗೆ ತಿಳಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆಂದು ಹೇಳಿದರು.
ಆದರೆ, ಈ ಎಲ್ಲಾ ವಿವರಣೆಗಳಿಗೆ ಸಂಬಂಧಿಸಿ ತೀವ್ರ ಅಸಮಾಧಾನಗೊಂಡ ಸದಸ್ಯರು ಯಾರ ಮೇಲೂ ಕ್ರಮ ಕೈಗೊಳ್ಳುವುದರಿಂದ ಬೀದಿಯಲ್ಲಿ ಹೋದ ನಗರಸಭೆ ಸದಸ್ಯರ ಗೌರವ ಮರಳಲು ಸಾಧ್ಯವೇ?. ಇಂತಹ ಘಟನೆ ನಡೆದಿರುವುದೇ ದುರದೃಷ್ಟಕರ. ಮತ್ತೇ ಇದು ಮರುಕಳುಹಿಸಿದಂತೆ ಎಚ್ಚರ ವಹಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆಂದು ಹೇಳಿದರು.
ಸಭೆಯಲ್ಲಿ ಆರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯರಾದ ಶ್ರೀನಿವಾಸ ರೆಡ್ಡಿ, ದರೂರು ಬಸವರಾಜ ಅವರು ಮಾತನಾಡುತ್ತಾ, ಇಂತಹದೊಂದು ಪ್ರಕರಣ ನಡೆದಿದ್ದರೂ, ನಗರಸಭೆ ಅಧಿಕಾರಿಗಳು ಏಕೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ?. ಈ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳಾದ ನಿಮಗೆ ಮತ್ತು ಅಧ್ಯಕ್ಷರಿಗೆ ಮಾತ್ರ ಗಂಭೀರ ಎನಿಸಿದೆ, ಸದಸ್ಯರಿಗೆ ಇದು ಗಂಭೀರವಾಗಿರಲಿಲ್ಲವೇ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದರೂರು ಬಸವರಾಜ ಅವರು ಮಾತನಾಡುತ್ತಾ, ಈ ಬಗ್ಗೆ ಸದಸ್ಯರಿಗೇಕೆ ಮಾಹಿತಿ ನೀಡಲಿಲ್ಲ?. ನೀರು ನಿರ್ವಹಣೆಗೆ ಸಂಬಂಧಿಸಿದ ಅಧಿಕಾರಿಗಳು ಸಹ ಯಾವುದೇ ಮಾಹಿತಿ ನೀಡಿಲ್ಲ. ಈಗ ಉತ್ತರ ಕೊಡಲು ಯಾರು ಇಲ್ಲ ಎಂದು ಆಯುಕ್ತರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಈ ರೀತಿ ಅಧಿಕಾರ ನಿರ್ವಹಿಸುವುದರಿಂದ ಇಂದು ಈ ಘಟನೆ ನಡೆಯಲು ಸಾಧ್ಯವಾಗಿದೆ. ನಗರಸಭೆ ಸದಸ್ಯರಾದ ನಾವು ಜನರ ಮಧ್ಯೆ ಯಾವ ರೀತಿಯಲ್ಲಿ ತಿರುಗಾಡಬೇಕು ಎಂದು ಪ್ರಶ್ನಿಸಿದರು.
ಬಿಜೆಪಿ ಸದಸ್ಯರಾದ ನಾಗರಾಜ ಮಾತನಾಡುತ್ತಾ, ಸತ್ತವರಿಗೆ ಪರಿಹಾರ, ಅಧಿಕಾರಿಗಳ ಅಮಾನತು ಮಾಡಿದರೇ, ಈ ಸಮಸ್ಯೆ ಬಗೆಹರಿಯುವುದೇ ? ಜನರಿಗೆ ಒಳ್ಳೆಯ ನೀರು ಕೊಡಲು ಸಾಧ್ಯವಾಗದಿದ್ದರೇ ನಾವು ಇರುವುದಾದರೂ ಏಕೆ ?. ಅಲಂ, ಬ್ಲಿಚಿಂಗ್ ಇಲ್ಲದೇ ಸುಧೀರ್ಘ ಅವಧಿಯಿಂದ ನೀರು ಪೂರೈಕೆ ಮಾಡುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಸರ್ಕಾರದಿಂದ ಸತ್ತವರಿಗೆ ೫ ಲಕ್ಷ ಪರಿಹಾರ ನೀಡಲಾಗುತ್ತಿದೆ. ಆದರೆ, ಈ ರೀತಿಯ ಘಟನೆಗಳು ಮತ್ತೇ ಮರಕಳುಹಿಸದಂತೆ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು. ನಗರದ ಜನರಿಗೆ ನಾವು ಕುಡಿವ ನೀರು ಬದಲು, ವಿಷ ಕೊಡುತ್ತಿದ್ದೇವೆ. ನಾವು ಜನರ ಮಧ್ಯೆ ಮುಖ ಎತ್ತಿಕೊಂಡು ಅವರ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವೇ?. ನೀರಿನ ವಿಷಯದಲ್ಲಿ ಯಾರು ರಾಜಕೀಯ ಮಾಡುವುದು ಬೇಡ. ಈಗ ನಡೆದ ಘಟನೆ ಪುನಃ ನಡೆಯದಂತೆ ಗಮನ ಹರಿಸುವಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕೆಂದು ಹೇಳಿದರು.
ಈ.ಶಶಿರಾಜ ಅವರು ಮಾತನಾಡುತ್ತಾ, ರಾಂಪೂರು ಜಲಾಶಯದಿಂದ ಪೂರೈಕೆಯಾಗುವ ನೀರು ಕಲುಷಿತಗೊಂಡಿರುವುದರಿಂದ ಮೂರು ಜನ ಸತ್ತು, ೬೦ ಜನ ಆಸ್ಪತ್ರೆ ಪಾಲಾಗಿದ್ದಾರೆ. ಶುದ್ಧೀಕರಣ ಘಟಕದಲ್ಲಿ ೪೦ ಸಾವಿರ ವೆಚ್ಚದ ಫಿಲ್ಟರ್ ಬೆಡ್ ಬದಲಿಸಲು ಸಾಧ್ಯವಾಗಲಿಲ್ಲ. ೫ ವರ್ಷದಲ್ಲಿ ಶುದ್ಧೀಕರಣ ಘಟಕದಲ್ಲಿ ೧೦ ಅಡಿ ಹೂಳು ತುಂಬಿದೆ. ಈ ಎಲ್ಲಾ ಘಟನೆಗೆ ನಗರಸಭೆ ಹೊಣೆಯಾಗಿದೆ. ಈ ಹಿನ್ನೆಲೆಯಲ್ಲಿ ಪರಿಹಾರ ನೀಡಲೇಬೇಕೆಂದು ಒತ್ತಾಯಿಸಿದರು.
ಶರಣಪ್ಪ ಬಲ್ಲಟಗಿ ಅವರು ಮಾತನಾಡುತ್ತಾ, ನಗರದಲ್ಲಿರುವ ೩೫ ಟ್ಯಾಂಕರ್‌ಗಳಲ್ಲಿ ಎಷ್ಟು ಟ್ಯಾಂಕರ್‌ಗಳನ್ನು ಶುದ್ಧೀಕರಣಗೊಳಿಸಲಾಗಿದೆಂದು ಪ್ರಶ್ನಿಸಿದ ಅವರು, ವಾರ್ಡ್ ೫ ರಲ್ಲಿ ೧೯೯೬ ರಲ್ಲಿ ಪಿ.ಅಶೋಕ ಸದಸ್ಯರಾಗಿದ್ದಾಗ ೧ ಟ್ಯಾಂಕ್ ಮಾತ್ರ ಇತ್ತು. ನಂತರ ೨೦೦೧ ರ ನಂತರ ಉಗ್ರ ನರಸಿಂಹಪ್ಪ ಸದಸ್ಯರಾಗಿದ್ದ ಅವಧಿಯಲ್ಲಿ ತೊಳೆದ ಟ್ಯಾಂಕ್ ಇಲ್ಲಿವರೆಗೂ ಮತ್ತೇ ಸ್ವಚ್ಛಗೊಂಡಿಲ್ಲ. ಪುಷ್ಪ ರುದ್ರಪ್ಪ ಅಂಗಡಿ ಅವರ ಅವಧಿಯಲ್ಲಿ ಮತ್ತೊಂದು ಟ್ಯಾಂಕ್ ನಿರ್ಮಾಣವಾಗಿದ್ದು, ಈ ಟ್ಯಾಂಕನ್ನು ಇಲ್ಲಿವರೆಗೂ ನಿರ್ವಹಣೆ ಮಾಡುತ್ತಿಲ್ಲ. ಇದರಿಂದಾಗಿ ಇಂತಹ ನಿರ್ಲಕ್ಷ್ಯದಿಂದಾಗಿ ಇಂದು ಜನರು ತೀವ್ರ ತೊಂದರೆಗೆ ಗುರಿಯಾಗುವಂತಾಗಿದೆ. ಈ ಸಾವು, ನೋವಿಗೆ ಕಾರಣವಾಗಿದೆ. ತಕ್ಷಣವೇ ಎಲ್ಲಾ ಟ್ಯಾಂಕರ್‌ಗಳ ಶುದ್ಧೀಕರಣಗೊಳ್ಳಬೇಕೆಂದು ಒತ್ತಾಯಿಸಿದರು.
ಬಿ.ರಮೇಶ, ಸಣ್ಣ ನರಸರೆಡ್ಡಿ, ಈರಣ್ಣ ಮಾತನಾಡುತ್ತಾ, ಇಂತಹ ಘಟನೆಗಳು ನಡೆದಾಗ ನಗರಸಭೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಧಿಕಾರಿಗಳು ನಗರಸಭೆ ಸದಸ್ಯರಿಗೆ ಮಾಹಿತಿ ನೀಡಬೇಕು. ವಾರ್ಡ್‌ಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕೆಂದು ಸಲಹೆ ನೀಡಿದರು.
ಪರಿಹಾರಕ್ಕೆ ಸಂಬಂಧಿಸಿ ವಿಷಯ ಪ್ರಸ್ತಾಪಗೊಂಡಾಗ ಕಾಂಗ್ರೆಸ್ ಸದಸ್ಯ ಶ್ರೀನಿವಾಸ ರೆಡ್ಡಿ ಅವರು ಮಾತನಾಡುತ್ತಾ, ೧೦ ಲಕ್ಷ ಮೃತಪಟ್ಟವರಿಗೆ ಪರಿಹಾರ ನೀಡಬೇಕು. ೨೦ ಸಾವಿರ ವೈದ್ಯಕೀಯ ವೆಚ್ಚಕ್ಕೆ ನೀಡುವಂತೆ ಸಭೆಯ ಮುಂದೆ ಪ್ರಸ್ತಾಪಿಸಿದರು. ಜಯಣ್ಣ ಅವರು ಈ ಪ್ರಸ್ತಾಪದ ಬಗ್ಗೆ ಸಭೆಯ ಅಭಿಪ್ರಾಯ ಕೇಳಿದಾಗ ಶಶಿರಾಜ, ನಾಗರಾಜ ಸೇರಿದಂತೆ ಎಲ್ಲರೂ ಸರ್ವಾನು ಮತದಿಂದ ಅನುಮೋದಿಸಿ, ಪರಿಹಾರಕ್ಕೆ ಸಂಬಂಧಿಸಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯ ಆರಂಭದಲ್ಲಿ ಕಲುಷಿತ ನೀರಿನಿಂದ ಮೃತಪಟ್ಟ ಮೂವರಿಗೆ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಈ ಸಭೆಯಲ್ಲಿ ಉಪಾಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ ಉಪಸ್ಥಿತರಿದ್ದರು.