ಸಿರಗುಪ್ಪ: ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಪ್ರಣವ ಸ್ವರೂಪಿ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳ ಜನ್ಮ ಜಯಂತಿಯ ಅಂಗವಾಗಿ ನಗರದ ಗಾಂಧಿ ವೃತ್ತದಲ್ಲಿ ಮಜ್ಜಿಗೆ ವಿತರಣೆ ಕಾರ್ಯಕ್ರಮ ಜರುಗಿತು.
ಸಿರುಗುಪ್ಪ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಪ್ರಜಾ ತರಂಗ ಪತ್ರಿಕೆಯ ಸಂಪಾದಕರು ಮತ್ತು ಗೆಳೆಯರ ಸಹಕಾರದಿಂದ ನಡೆದಾಡುವ ದೇವರೆಂದೆನಿಸಿದ್ದ ಸಿದ್ಧಗಂಗೆಯ ಶಿವಕುಮಾರ ತಾತನವರ ಜನ್ಮದಿನದ ಅಂಗವಾಗಿ ವಿಶೇಷವಾಗಿ ಮಜ್ಜಿಗೆ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮಕ್ಕೆ ಬಸವ ಮತದ ಶ್ರೀ ಬಸವ ಭೂಷಣ ಸ್ವಾಮೀಜಿಗಳವರು ಚಾಲನೆ ನೀಡಿದರು. ಈ ವೇಳೆ ಬಸವ ಬೂಷಣ ಶ್ರೀಗಳು ಮಾತನಾಡಿ, ನಡುನೆತ್ತಿಗೆ ಸುಡು ಬಿಸಿಲಿನಲ್ಲಿ ವಿವಿಧ ಕೆಲಸಗಳಿಗೆ ಬರುವ ತಾಲ್ಲೂಕಿನ ಜನರು ಸಹಜವಾಗಿ ನೀರು ಮತ್ತು ತಂಪಾದ ಮಜ್ಜಿಗೆಗೆ ಮೊರೆ ಹೋಗುತ್ತಾರೆ. ಹಣವಿಲ್ಲದ ಬಡವರು ಇಂತಹ ಅರವಟಿಗೆಗಳಿಂದ ನೀರು ಮತ್ತು ಮಜ್ಜಿಗೆ ಪಡೆದು ದಾಹ ಇಂಗಿಸಿ ಕೊಳ್ಳುತ್ತಾರೆ. ಇದರಿಂದ ನೀರು ಮತ್ತು ಮಜ್ಜಿಗೆ ದಾನಗಳು ಪ್ರಶಂಸನೀಯ ವಾಗುತ್ತವೆ ಎಂದು ಶ್ರೀಗಳು ಹೇಳಿದರು.